ವಯನಾಡ್, ಕೇರಳ:ಜುಲೈ 30 ರಂದು ವಯನಾಡ್‌ನಲ್ಲಿ ಸಂಭವಿಸಿದ ಭೂ ಭೂಕುಸಿತದಲ್ಲಿ 308 ಸಾವುಗಳು ಸಂಭವಿಸಿವೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಶುಕ್ರವಾರ ಖಚಿತಪಡಿಸಿದ್ದಾರೆ. ಭೂಕುಸಿತದಿಂದ ಹಾನಿಗೊಳಗಾದ ಮೆಪ್ಪಾಡಿ ಪ್ರದೇಶದ ಚೂರಲ್ಮಲಾ ಮತ್ತು ಮುಂಡಕ್ಕೈನಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ನಡೆಯುತ್ತಿವೆ. ಈವರೆಗೆ 195 ಮೃತದೇಹಗಳು ಹಾಗೂ 113 ದೇಹದ ಭಾಗಗಳು ಪತ್ತೆಯಾಗಿವೆ ಎಂದು ಸಚಿವ ಜಾರ್ಜ್ ತಿಳಿಸಿದ್ದಾರೆ.
ಭೂಕುಸಿತದಿಂದ ಪ್ರತ್ಯೇಕವಾಗಿರುವ ಚೂರಲ್ಮಲಾ ಮತ್ತು ಮುಂಡಕ್ಕೈ ಪ್ರದೇಶಗಳನ್ನು ಸಂಪರ್ಕಿಸುವ ಇರುವಂಜಿಪ್ಪುಳ ನದಿಯ ಮೇಲೆ ನಿರ್ಮಿಸಲಾದ 190 ಅಡಿ ಬೈಲಿ ಸೇತುವೆಯನ್ನು ಭಾರತೀಯ ಸೇನೆಯು ಇಂದು ಮುಂಜಾನೆ ನಾಗರಿಕ ಆಡಳಿತಕ್ಕೆ ಹಸ್ತಾಂತರಿಸಿದೆ.
ಮತ್ತೊಂದು ಕಡೆ ಈ ದುರಂತದ ಬಗ್ಗೆ ಮಾತನಾಡಿರುವ ಎಡಿಜಿಪಿ ಎಂ ಆರ್ ಅಜಿತ್ ಕುಮಾರ್, ಪ್ರವಾಹ ಪೀಡಿತ ಪ್ರದೇಶಮುಂಡಕ್ಕೈನಲ್ಲಿ ಕಣ್ಮರೆಯಾದವರ ಹುಡುಕಾಟ ಮತ್ತು ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಎಂದು ತಿಳಿಸಿದ್ದಾರೆ. 300 ಜನರು ಕಣ್ಮರೆಯಾಗಿದ್ದು, ಕಂದಾಯ ಇಲಾಖೆ ವಿವರಗಳ ಸಂಗ್ರಹಿಸಿದ ನಂತರ, ಇನ್ನೊಂದೆರಡು ಮೂರು ದಿನದಲ್ಲಿ ಈ ಕುರಿತು ಅಂತಿಮ ಚಿತ್ರಣ ಸಿಗಲಿದೆ ಎಂದರು.
ಭೂ ಕುಸಿತಕ್ಕೆ ಒಳಗಾಗಿರುವ ಪ್ರದೇಶವನ್ನು ಆರು ವಲಯವಾಗಿ ವಿಭಾಗಿಸಲಾಗಿದೆ. ಶ್ವಾನಗಳ ಸಹಾಯದಿಂದ ಪ್ರತ್ಯೇಕ ತಂಡಗಳಿಂದ ಮೃತರ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ. ವಿಶೇಷ ಏಜೆನ್ಸಿಗಳ ಸಹಾಯದಿಂದ ಕೇರಳ ಪೊಲೀಸರು ಕೋಯಿಕ್ಕೋಡ್ ನಗರದವರೆಗೆ ಚಾಲಿಯಾರ್ ನದಿಯಲ್ಲಿ ಕೂಂಬಿಂಗ್ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಇದರ ಜೊತೆಗೆ ನಾವು ನದಿ ಕೂಂಬಿಂಗ್ ಸಹ ನಡೆಸಲಿದ್ದೇವೆ. ನಿನ್ನೆ ಪೊತುಕಲ್ನಲ್ಲಿ ಮೃತ ದೇಹ ಪತ್ತೆ ಮಾಡಿದೆವು. ಇದೀಗ ಕೋಯಿಕ್ಕೋಡ್ ನಗರದವರೆಗೆ ಚಾಲಿಯರ್ ನದಿಯ ಎಲ್ಲ ದಂಡೆಗಳನ್ನು ಠಾಣಾ ವ್ಯಾಪ್ತಿಯಲ್ಲಿ ಪರಿಶೀಲನೆ ಮಾಡುವಂತೆ ಎಲ್ಲಾ ಪೊಲೀಸ್ ಠಾಣೆಗಳಿಗೆ ನಿರ್ದೇಶಿಸಲಾಗಿದೆ. ಮಲಪ್ಪುರಂ ಜಿಲ್ಲೆಯಲ್ಲಿನ ಚಾಲಿಯರ್ ನದಿ ದಂಡೆಯಲ್ಲೂ ಕೆಲವು ಮೃತ ದೇಹ ಪತ್ತೆಯಾಗಿರುವ ವರದಿ ಬಂದಿದೆ. ವಯನಾಡಿನಲ್ಲಿ ಆದ ಭೂ ಕುಸಿತದಿಂದ ಮಲಪ್ಪುರಂನವರೆಗೆ ಚಾಲಿಯಾರ್ನದಿಯಲ್ಲಿ 143 ಮೃತ ದೇಹ ಮತ್ತು ಕೆಲವು ದೇಹದ ಭಾಗಗಳು ಕೊಚ್ಚಿಕೊಂಡು ಬಂದಿರುವುದು ಪತ್ತೆಯಾಗಿದೆ ಎಂದು ವಿವರಣೆ ನೀಡಿದರು.