ಇಸ್ಲಾಮಾಬಾದ್: ನವೆಂಬರ್ 26ರ ಪ್ರತಿಭಟನೆಯ ನಂತರ ಬಂಧಿಸಲ್ಪಟ್ಟ 120ಕ್ಕೂ ಹೆಚ್ಚು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಕಾರ್ಯಕರ್ತರನ್ನು ತಕ್ಷಣ ಬಿಡುಗಡೆ ಮಾಡುವಂತೆ ಇಸ್ಲಾಮಾಬಾದ್ ಹೈಕೋರ್ಟ್ ಆದೇಶಿಸಿದೆ ಎಂದು ದಿ ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸರ್ಫರಾಜ್ ದೋಗರ್ ಮತ್ತು ನ್ಯಾಯಮೂರ್ತಿ ಮುಹಮ್ಮದ್ ಆಸಿಫ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಗುರುವಾರ ಬಂಧಿತರಿಗೆ ಜಾಮೀನು ಮಂಜೂರು ಮಾಡಿದೆ. ಭವಿಷ್ಯದಲ್ಲಿ ಇಂಥ ಕೃತ್ಯಗಳಲ್ಲಿ ತೊಡಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಆಯಾ ಪೊಲೀಸ್ ಠಾಣೆಗಳಲ್ಲಿ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯವು ಅವರಿಗೆ ಸೂಚಿಸಿದೆ.
ವಕೀಲರಾದ ಅಲಿ ಬುಖಾರಿ, ಬಾಬರ್ ಅವಾನ್ ಮತ್ತು ಮುರ್ತಾಜಾ ಟೋರಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಪ್ರತಿ ಆರೋಪಿಯು 20,000 ಪಾಕಿಸ್ತಾನಿ ರೂಪಾಯಿ (ಪಿಕೆಆರ್) ಜಾಮೀನು ಮೊತ್ತ ಹಾಗೂ ಓರ್ವ ವ್ಯಕ್ತಿಯ ಭದ್ರತೆ ನೀಡಬೇಕಿದೆ. ನವೆಂಬರ್ 26, 2024ರಂದು ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಈ ಎಲ್ಲ ಆರೋಪಿಗಳನ್ನು ಬಂಧಿಸಲಾಗಿತ್ತು.
ಇದಕ್ಕೂ ಮುನ್ನ ಜನವರಿಯಲ್ಲಿ, ಮೇ 9ರಂದು ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಶಿಕ್ಷೆಗೊಳಗಾದ 19 ಜನರು ಸಲ್ಲಿಸಿದ ಕ್ಷಮಾದಾನ ಅರ್ಜಿಗಳನ್ನು ಕೂಡ ಅಂಗೀಕರಿಸಲಾಗಿದೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್ ಪಿಆರ್) ಹೇಳಿಕೆಯಲ್ಲಿ ತಿಳಿಸಲಾಗಿದೆ.
2023ರ ಮೇ 9ರಂದು ನಡೆದ ಪ್ರತಿಭಟನೆಯ ವೇಳೆ ಸೇನಾ ನೆಲೆಗಳ ಮೇಲೆ ಹಿಂಸಾತ್ಮಕ ದಾಳಿ ನಡೆಸಿದ 60 ನಾಗರಿಕರಿಗೆ ಕಳೆದ ವರ್ಷ ಡಿಸೆಂಬರ್ ನಲ್ಲಿ ಮಿಲಿಟರಿ ನ್ಯಾಯಾಲಯಗಳು ಜೈಲು ಶಿಕ್ಷೆ ವಿಧಿಸಿದ್ದವು.
ಐಎಸ್ಪಿಆರ್ ಹೇಳಿಕೆಯ ಪ್ರಕಾರ, ಲಾಹೋರ್‌ನ ಕಾರ್ಪ್ಸ್ ಕಮಾಂಡರ್ ಹೌಸ್, ಫೈಸಲಾಬಾದ್ ನಲ್ಲಿರುವ ಐಎಸ್ಐ ಕಚೇರಿ ಮತ್ತು ರಾವಲ್ಪಿಂಡಿಯ ಜನರಲ್ ಹೆಡ್ ಕ್ವಾರ್ಟರ್ಸ್ (ಜಿಎಚ್ ಕ್ಯೂ) ಬನ್ನು ಕಂಟೋನ್ಮೆಂಟ್ ಸೇರಿದಂತೆ ಪ್ರಮುಖ ಮಿಲಿಟರಿ ಮತ್ತು ಸರ್ಕಾರಿ ಕಚೇರಿಗಳ ಮೇಲಿನ ಹಿಂಸಾತ್ಮಕ ದಾಳಿಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಈ ಜನರನ್ನು ಶಿಕ್ಷೆಗೆ ಗುರಿಪಡಿಸಲಾಗಿದೆ. ಪಿಟಿಐ ಸಂಸ್ಥಾಪಕ ಇಮ್ರಾನ್ ಖಾನ್ ಬಂಧನದ ನಂತರ 2023ರ ಮೇ 9ರಂದು ಪಾಕಿಸ್ತಾನದಲ್ಲಿ ಭಾರಿ ಪ್ರಮಾಣದ ಪ್ರತಿಭಟನೆಗಳು ಭುಗಿಲೆದ್ದಿದ್ದವು.
ಸಭೆ ನಡೆಸಲು ಅನುಮತಿ ಕೋರಿದ ಪಿಟಿಐ: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಗಳು ಮುಗಿದ ನಂತರ ಮಿನಾರ್-ಇ-ಪಾಕಿಸ್ತಾನದಲ್ಲಿ ರಾಜಕೀಯ ಸಭೆ ನಡೆಸಲು ಅನುಮತಿ ಕೋರಿ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಂಜಾಬ್ ವಿಭಾಗವು ಹೊಸ ಅರ್ಜಿಯನ್ನು ಸಲ್ಲಿಸಿದೆ ಎಂದು ಡಾನ್ ವರದಿ ಮಾಡಿದೆ. ಈ ಹಿಂದೆ ಸರ್ಕಾರವು ಸಭೆಗೆ ಅನುಮತಿ ನಿರಾಕರಿಸಿದ್ದರೂ ಪಿಟಿಐ ಪಂಜಾಬ್ ಹಿರಿಯ ಉಪಾಧ್ಯಕ್ಷ ಅಕ್ಮಲ್ ಖಾನ್ ಬಾರಿ ಅವರು ಮಿನಾರ್-ಇ-ಪಾಕಿಸ್ತಾನದಲ್ಲಿ ಶಾಂತಿಯುತ ರ್ಯಾಲಿ ನಡೆಸಲು ಅನುಮತಿ ಕೋರಿ ಮತ್ತೆ ಅರ್ಜಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: 'ಝೆಲೆನ್ಸ್ಕಿ ಪಾತ್ರವಿಲ್ಲದೆಯೇ ಉಕ್ರೇನ್ ಯುದ್ಧ ನಿಲ್ಲಿಸಬಲ್ಲೆ': ಟ್ರಂಪ್ ಬೆದರಿಕೆ - UKRAINE WAR