ದಂಥೇವಾಡ(ಛತ್ತೀಸ್‌ಗಢ): ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆ ಎಂಬ ಅನುಮಾನದಿಂದ ನಕ್ಸಲರು ಇಬ್ಬರು ನಾಗರಿಕರನ್ನು ಕೊಲೆಗೈದ ಘಟನೆ ಛತ್ತೀಸ್ಗಢದ ದಂಥೇವಾಡದಲ್ಲಿ ಬುಧವಾರ ನಡೆದಿದೆ.
ಬಮನ್ ಕಶ್ಯಪ್ (29) ಮತ್ತು ಅನಿಸ್ ರಾಮ್ ಪೊಯಮ್ (38) ಕೊಲೆಯಾದವರು. ಇವರು ಬರ್ಸೊರ್ ಪೊಲೀಸ್ ಠಾಣಾ ವ್ಯಾಪ್ತಿಯ ತೊಡ್ಮ ಗ್ರಾಮದವರು ಎಂದು ತಿಳಿದು ಬಂದಿದೆ. ಬುಧವಾರ ಇವರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ಸಿಕ್ಕ ಬಳಿಕ ಪೊಲೀಸ್ ತಂಡ ದಂಥೇವಾಡ-ಬಿಜಾಪುರ್ ಗ್ರಾಮದ ಗಡಿಯಲ್ಲಿ ದಟ್ಟ ಅರಣ್ಯದಲ್ಲಿರುವ ಗ್ರಾಮಕ್ಕೆ ಆಗಮಿಸಿತು. ಕೊಲೆ ಬಗ್ಗೆ ಮತ್ತಷ್ಟು ಮಾಹಿತಿ ದೊರೆಯಬೇಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಾವನ್ನಪ್ಪಿದ ಕಶ್ಯಪ್ ಈ ಪ್ರದೇಶದಲ್ಲಿ ಶಿಕ್ಷಾ ದೂತ್ (ತಾತ್ಕಲಿಕ ಶಿಕ್ಷಕ)ಆಗಿ ಸರ್ಕಾರಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಮಾವೋವಾದಿಗಳ ಪೂರ್ವ ಬಸ್ತಾರ್ ವಿಭಾಗದ ಆಮದೈ ಪ್ರದೇಶ ಸಮಿತಿಯ ಕರಪತ್ರಗಳು ಸ್ಥಳದಲ್ಲಿ ಪತ್ತೆಯಾಗಿದೆ. ಅದರಲ್ಲಿ ಇವರು ಪೊಲೀಸ್ ಮಾಹಿತಿದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ನಕ್ಸಲರು ಆರೋಪಿಸಿದ್ದಾರೆ.
ಅಕ್ಟೋಬರ್ 2024ರ ಎನ್‌ಕೌಂಟರ್‌ಗೂ ಮುನ್ನ ಮಾವೋವಾದಿಗಳ ಚಲನವಲನದ ಬಗ್ಗೆ ಕಶ್ಯಪ್ ದಾಂತೇವಾಡ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ಕರಪತ್ರದಲ್ಲಿ ಬರೆಯಲಾಗಿದೆ. ಅಂದು ನಡುವೆ ನಡೆದ ಭೀಕರ ಎನ್ಕೌಂಟರ್ನಲ್ಲಿ 38 ಜನ ಮಾವೋಗಳನ್ನು ಹತ್ಯೆ ಮಾಡಲಾಗಿತ್ತು. ಬುಧವಾರ ಕೂಡ ಪ್ರತ್ಯೇಕ ಘಟನೆಯಲ್ಲಿ ಬಸ್ತಾರ್ ವಿಭಾಗದಲ್ಲಿ 7 ಮಾವೋಗಳ ಹತ್ಯೆ ಮಾಡಲಾಗಿದೆ. ಫೆ 6ರಂದು ನಕ್ಸಲರು ದಂಥೇವಾಡ ಜಿಲ್ಲೆಯ ಮಾಜಿ ಸರಪಂಚ್ ಅವರನ್ನು ಕೊಂದಿದ್ದರು. ಫೆ.4ರಂದು 30 ವರ್ಷದ ವ್ಯಕ್ತಿಯನ್ನು ದಂಥೇವಾಡದ ಅರ್ನಪುರ ಪ್ರದೇಶದಲ್ಲಿ ಹತ್ಯೆ ಮಾಡಲಾಗಿತ್ತು. ಪೊಲೀಸರ ಪ್ರಕಾರ, ಬಸ್ತಾರ್ ಪ್ರದೇಶದಲ್ಲಿ ನಕ್ಸಲ್ ಹಿಂಸಾಚಾರದ ಪ್ರತ್ಯೇಕ ಘಟನೆಯಲ್ಲಿ 68 ನಾಗರಿಕರ ಹತ್ಯೆ ಮಾಡಲಾಗಿದೆ.
ಇದನ್ನೂ ಓದಿ: ಯುಪಿಯಲ್ಲಿ ದುಷ್ಕರ್ಮಿಗಳಿಗೆ ದುಸ್ವಪ್ನವಾಗಿ ಕಾಡುವ ಯೋಗಿ ಸರ್ಕಾರ; 2017ರಿಂದ 220 ಮಂದಿ ಎನ್ಕೌಂಟರ್