ವಯನಾಡ್(ಕೇರಳ):ಪ್ರವಾಸಿಗರ ಸ್ವರ್ಗವಾದ ವಯನಾಡ್ ರಕ್ಕಸ ಭೂಕುಸಿತಕ್ಕೆ ನರಕಸದೃಶದಂತೆ ಬದಲಾಗಿದೆ. ಜುಲೈ 30ರಂದು ಸಂಭವಿಸಿದ್ದ ಭೀಕರ ಗುಡ್ಡಕುಸಿತ ಮತ್ತು ಪ್ರವಾಹಕ್ಕೆ ತುತ್ತಾಗಿ ಈವರೆಗೂ ಬಲಿಯಾದವರ ಸಂಖ್ಯೆ 400 ದಾಟಿದೆ. ಕಳೆದ 10 ದಿನಗಳಿಂದ ನಡೆಯುತ್ತಿದ್ದ ರಕ್ಷಣಾ ಕಾರ್ಯಾಚರಣೆ ಮುಕ್ತಾಯವಾಗಿದೆ. ದುರಂತ ಸ್ಥಳಗಳಲ್ಲಿ ಸಿಲುಕಿದ್ದ ಜನರ ರಕ್ಷಣೆಗೆ ಜೀವದ ಹಂಗು ತೊರೆದು ಕಾರ್ಯಾಚರಣೆ ನಡೆಸಿದ ಸೇನಾ ಪಡೆಗೆ ಭಾವನಾತ್ಮಕ ಬೀಳ್ಕೊಡುಗೆ ನೀಡಲಾಗಿದೆ.
ಪ್ರಕೃತಿ ವಿಕೋಪಕ್ಕೆ ತುತ್ತಾಗಿದ್ದ ವಯನಾಡ್‌ನಲ್ಲಿ ಎನ್ಡಿಆರ್ಎಫ್, ಎಸ್ಡಿಆರ್ಎಫ್, ಅಗ್ನಿಶಾಮಕ ದಳ, ಸ್ಥಳೀಯ ಪೊಲೀಸರ ಜೊತೆಗೆ ಯೋಧರೂ ಕೈ ಜೋಡಿಸಿದ್ದರು. ಬೆಟ್ಟ, ಗುಡ್ಡ, ಅವಶೇಷಗಳಲ್ಲಿ ಸಿಲುಕಿದ್ದ ಸಾವಿರಾರು ಜನರನ್ನು ರಕ್ಷಣೆ ಮಾಡಲಾಗಿದೆ. ಅವಶೇಷಗಳಡಿ ಸಿಲುಕಿದ ನೂರಾರು ಶವಗಳನ್ನೂ ಗುರುತಿಸಿ ಹೊರತರಲಾಗಿತ್ತು. ಸಾವಿನ ಮನೆಯಲ್ಲಿ ದಣಿವರಿಯದೆ ರಕ್ಷಣಾ ಕಾರ್ಯಾಚರಣೆ ನಡೆಸಿ, ಜೀವ ಉಳಿಸಿಕೊಂಡು ರಕ್ಷಣೆಗೆ ಕಾದಿದ್ದವರನ್ನು ಜೀವಂತವಾಗಿ ತಂದಿದ್ದರು.
ಜೀವರಕ್ಷಕ ಯೋಧರಿಗೆ ಸೆಲ್ಯೂಟ್:ದುರಂತದ ದಿನದಿಂದ ಸತತ 10 ದಿನ ಕಾರ್ಯಾಚರಣೆಯಲ್ಲಿ ತೊಡಗಿದ್ದ ಭಾರತದ ಯೋಧರಿಗೆ ವಯನಾಡ್ ಜಿಲ್ಲಾಡಳಿತ ಗುರುವಾರ ಬೀಳ್ಕೊಟ್ಟಿತು. ಈ ವೇಳೆ ಜನರೂ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿ ಜೀವ ಉಳಿಸಿದ ಯೋಧರಿಗೆ ಗೌರವ ಸಲ್ಲಿಸಿದರು. ಎರಡೂ ಬದಿಗಳಲ್ಲಿ ನಿಂತುಕೊಂಡು ಚಪ್ಪಾಳೆ ತಟ್ಟುತ್ತಾ, ಸೆಲ್ಯೂಟ್ ಹೊಡೆದು ಅವರನ್ನು ಕಳುಹಿಸಿಕೊಟ್ಟರು. ಜನರ ಮುಖದಲ್ಲಿ ಕೃತಜ್ಞತಾ ಭಾವ ಇತ್ತು. ನಮಗಾಗಿ ಶ್ರಮಿಸಿದ ನಿಮಗೆಲ್ಲಾ 'ಸೆಲ್ಯೂಟ್' ಎಂದರು.