ಅಯೋಧ್ಯೆ(ಉತ್ತರ ಪ್ರದೇಶ):ಕೇಂದ್ರ ಸರ್ಕಾರ 1954ರ ವಕ್ಫ್ ಬೋರ್ಡ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ಈ ಬಗ್ಗೆ ಮುಂದಿನ ವಾರ ಸಂಸತ್ತಿನಲ್ಲಿ ವಿಧೇಯಕ ಮಂಡನೆ ಮಾಡುವ ಸಾಧ್ಯತೆ ಇದೆ. ಸರ್ಕಾರದ ಈ ಕ್ರಮಕ್ಕೆ ಪರ-ವಿರೋಧ ವ್ಯಕ್ತವಾಗಿದೆ. ವಿಶೇಷವೆಂದರೆ, ಅಯೋಧ್ಯೆ ಶ್ರೀರಾಮ ದೇಗುಲದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಮಹಾರಾಜ್ ಅವರು ಪ್ರಸ್ತಾವಿತ ತಿದ್ದುಪಡಿ ವಿಧೇಯಕವನ್ನು ಸ್ವಾಗತಿಸಿದ್ದಾರೆ.
ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸುವ, ಅದರ ನಿಯಂತ್ರಣ, ಇದನ್ನು ಹೈಕೋರ್ಟ್‌ಗಳು ಕೂಡ ಪ್ರಶ್ನಿಸುವಂತಿಲ್ಲ ಎಂಬ ಅಂಶಗಳಿಗೆ ತಿದ್ದುಪಡಿ ತರುವ ಬಗ್ಗೆ ಕೇಂದ್ರ ಸರ್ಕಾರ ಮುಂದಾಗಿದೆ. ಜೊತೆಗೆ ಮಂಡಳಿಯಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಪ್ರಾತಿನಿಧ್ಯ ನೀಡುವ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.
ಈ ತಿದ್ದುಪಡಿ ಮಸೂದೆ ಅಂಗೀಕಾರದ ಬಳಿಕ ವಕ್ಫ್ ಆಸ್ತಿಯನ್ನು ವಶಕ್ಕೆ ಪಡೆಯುವ ಮೊದಲು ಸರ್ಕಾರಕ್ಕೆ ಮಾಹಿತಿ ನೀಡಬೇಕು. ಅನುಮತಿಯ ಮೇರೆಗೆ ಆಸ್ತಿಯನ್ನು ವಶಪಡಿಸಿಕೊಳ್ಳಬೇಕು ಎಂಬ ಪ್ರಮುಖ ಅಂಶವು ಪ್ರಸ್ತಾವಿತ ವಿಧೇಯಕದಲ್ಲಿದೆ. ಇದು ಮಂಡಳಿಯ ಪಾರದರ್ಶಕತೆ ಮತ್ತು ಆಸ್ತಿ ಮುಟ್ಟುಗೋಲಿನಲ್ಲಿ ಆಗುವ ಸಮಸ್ಯೆಯನ್ನೂ ಇದು ಬಗೆಹರಿಸಲಿದೆ ಎಂದು ಹೇಳಲಾಗಿದೆ.
ರಾಮನ ಅರ್ಚಕರು ಹೇಳಿದ್ದೇನು?:ವಕ್ಫ್ ಮಂಡಳಿ ಆಸ್ತಿ ಯಾವುದು?, ಯಾವ ಆಧಾರದ ಮೇಲೆ ಆಸ್ತಿ ಹೊಂದಿದೆ, ಆಸ್ತಿಯ ವಿತ್ತೀಯ ಮೌಲ್ಯ ಎಷ್ಟು? ಅದರ ಪರಿಶೀಲನೆ, ವಕ್ಫ್ ಅಧೀನದಲ್ಲಿರುವ ಭೂಮಿ, ವಿವಿಧ ಪ್ರದೇಶಗಳಲ್ಲಿನ ಬೋರ್ಡ್ಗಳ ಪರಿಶೀಲನೆ ನಡೆಯಬೇಕಿದೆ. ಆಸ್ತಿಯ ಮಾಲೀಕತ್ವದ ಆಧಾರ, ಭೂಮಿಯ ಮೂಲ ಮತ್ತು ಸ್ವಾಧೀನ ಪ್ರಕ್ರಿಯೆ ಸೇರಿದಂತೆ ಪ್ರತಿಯೊಂದು ಅಂಶವು ಪರಿಶೀಲನೆ ಒಳಪಡಬೇಕು ಎಂದು ಅಯೋಧ್ಯೆ ಶ್ರೀರಾಮ ದೇಗುಲದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಮಹಾರಾಜ್ ಅವರು ಅಭಿಪ್ರಾಯಪಟ್ಟಿದ್ದಾರೆ.