ಗೊಂಡಾ (ಉತ್ತರ ಪ್ರದೇಶ):ಪ್ಯಾರಿಸ್ ಒಲಿಂಪಿಕ್ನಲ್ಲಿ ನಿಯಮಗಳನುಸಾರ ಅನರ್ಹವಾಗಿದ್ದ ಕುಸ್ತಿಪುಟು ವಿನೇಶ್ ಪೋಗಟ್ ಕಾಂಗ್ರೆಸ್ ಸೇರಿದ್ದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. 2023 ರಲ್ಲಿ ಭಾರತೀಯ ಕುಸ್ತಿ ಸಂಸ್ಥೆಯ (ಡಬ್ಲ್ಯುಎಫ್‌ಐ) ವಿರುದ್ಧ ಮಹಿಳಾ ಕುಸ್ತಿಪಟುಗಳು ನಡೆಸಿದ ಪ್ರತಿಭಟನೆಯನ್ನು 'ಕಾಂಗ್ರೆಸ್ ಪಿತೂರಿ' ಎಂದು ಬಿಜೆಪಿ ಆರೋಪಿಸಿದೆ.
ಈ ಬಗ್ಗೆ ಮಾತನಾಡಿರುವ ಬಿಜೆಪಿ ಮಾಜಿ ಸಂಸದ, ಭಾರತೀಯ ಕುಸ್ತಿ ಸಂಸ್ಥೆಯ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್, ಕಳೆದ ವರ್ಷ ನನ್ನ ವಿರುದ್ಧ ಮಹಿಳಾ ಕುಸ್ತಿಪಟು ನಡೆಸಿದ ಹೋರಾಟ ನಕಲಿ ಮತ್ತು ಕಾಂಗ್ರೆಸ್ ಪಿತೂರಿ ಎಂದು ಹೇಳಿದ್ದೆ. ಅದು ಈಗ ನಿಜವಾಗಿದೆ. ಈ ಷಡ್ಯಂತ್ರದ ರೂವಾರಿಗಳು ಕಾಂಗ್ರೆಸ್ನ ದೀಪೇಂದರ್ ಸಿಂಗ್ ಹೂಡಾ ಮತ್ತು ಭೂಪಿಂದರ್ ಸಿಂಗ್ ಹೂಡಾ ಎಂದು ದೂರಿದರು.
ಕಾಂಗ್ರೆಸ್ನ ಹಿರಿಯ ನಾಯಕರು ನನ್ನ ವಿರುದ್ಧ ಷಡ್ಯಂತ್ರವನ್ನು ರೂಪಿಸಿದ್ದಾರೆ. ಅಂದು ಕೂಡ ನಾನು ಇದನ್ನೇ ಹೇಳಿದ್ದೆ. ಈಗಲೂ ಅದೇ ಮಾತಿಗೆ ಕಟಿಬದ್ಧವಾಗಿದ್ದೇನೆ. ವಿನೇಶ್ ಪೋಗಟ್ ಅವರು ಕಾಂಗ್ರೆಸ್ ಸೇರುವ ಮೂಲ ನನ್ನ ಆರೋಪವನ್ನು ದೃಢೀಕರಿಸಿದ್ದಾರೆ. ಇಡೀ ದೇಶವೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.
ಭೂಪಿಂದರ್ ಹೂಡಾ, ದೀಪೇಂದರ್ ಹೂಡಾ, ಭಜರಂಗ್ ಪೂನಿಯಾ ಮತ್ತು ವಿನೇಶ್ ಪೋಗಟ್ ಅವರು ಹೆಣ್ಣುಮಕ್ಕಳ ಘನತೆ ಮತ್ತು ಗೌರವವನ್ನು ಕಾಪಾಡಲು ಪ್ರತಿಭಟನೆ ನಡೆಸುತ್ತಿಲ್ಲ. ಬದಲಾಗಿ ಹರಿಯಾಣದ ಹೆಣ್ಣುಮಕ್ಕಳಿಗೆ ಇನ್ನಷ್ಟು ಮುಜುಗರ ತಂದಿಟ್ಟಿದ್ದಾರೆ. ಇದಕ್ಕೆ ಕಾಂಗ್ರೆಸ್ ಕೂಡ ಬೆಂಬಲ ನೀಡಿತು ಎಂದು ತೀವ್ರ ವಾಗ್ದಾಳಿ ನಡೆಸಿದರು.
ಒಲಿಂಪಿಕ್ ಅನರ್ಹತೆ ದೇವರು ಕೊಟ್ಟ ಶಿಕ್ಷೆ:ಪ್ಯಾರಿಸ್ ಒಲಿಂಪಿಕ್ನಲ್ಲಿ ವಿನೇಶ್ ಪೋಗಟ್ ಅನರ್ಹಗೊಂಡದ್ದನ್ನು ಪ್ರಸ್ತಾಪಿಸಿ ಟೀಕಿಸಿದ ಬಿಜೆಪಿ ಮಾಜಿ ಸಂಸದ, ಒಲಿಂಪಿಕ್ನಲ್ಲಿ ಭಾಗವಹಿಸುವ ಮೊದಲು ವಿನೇಶ್ ಪೋಗಟ್ ಎರಡು ವಿಭಾಗಗಳಲ್ಲಿ ಸ್ಪರ್ಧೆ ಮಾಡುವ ಪ್ರಯತ್ನ ಮಾಡಿದರು. ಒಂದರಲ್ಲಿ ಅವಕಾಶ ಸಿಗದ ಕಾರಣ ಮತ್ತೊಂದು ವಿಭಾಗದಲ್ಲಿ ಸ್ಪರ್ಧೆ ಮಾಡಿದರು. ನಿಯಮಗಳನ್ನು ಮೀರಿದ್ದರಿಂದ ಅವರು ಅನರ್ಹತೆಗೆ ಶಿಕ್ಷೆಗೆ ಒಳಗಾದರು. ಇದೆಲ್ಲವೂ ದೇವರು ನೀಡಿದ ಫಲಿತಾಂಶ ಎಂದು ಜರಿದರು.
ಹರಿಯಾಣ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆಗೊಳಿಸಿದ್ದು, ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಜುಲಾನಾ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಹರಿಯಾಣದ 31 ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಅದರಲ್ಲಿ ವಿನೇಶ್ ಫೋಗಟ್ ಮಣೆ ಹಾಕಲಾಗಿದ್ದು, ರಾಜಕೀಯ ಅಖಾಡ ರಂಗೇರಿದೆ.
ಇದನ್ನೂ ಓದಿ:ಕಾಂಗ್ರೆಸ್ ಸೇರಿರುವ ಫೋಗಟ್, ಪುನಿಯಾಗೆ ಶೋಕಾಸ್ ನೋಟಿಸ್; ಹೀಗಿದೆ ರೈಲ್ವೆ ಇಲಾಖೆ ಸ್ಪಷ್ಟನೆ - Show Cause Notice