ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಗೆಲ್ಲಲು ಕರ್ನಾಟಕ ಕಾಂಗ್ರೆಸ್ ಪಕ್ಷವು ಮದ್ಯ ಮಾರಾಟದಲ್ಲಿ 700 ಕೋಟಿ ರೂಪಾಯಿ ಲೂಟಿ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆರೋಪಿಸಿದ್ದಾರೆ.
ಇಲ್ಲಿನ ಅಕೋಲಾದಲ್ಲಿ ಶನಿವಾರ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಚುನಾವಣೆ ಹೆಸರಿನಲ್ಲಿ ಕರ್ನಾಟಕದಲ್ಲಿ ಭರ್ಜರಿ ವಸೂಲಿ ಕಾರ್ಯ ನಡೆಯುತ್ತಿದೆ ಎಂದು ಜನರು ಹೇಳುತ್ತಿದ್ದಾರೆ. ಒಂದು ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದ್ದರೆ, ವಸೂಲಿ ಮಾತ್ರ ಆ ಪಕ್ಷವು ಅಧಿಕಾರದಲ್ಲಿರುವ ಬೇರೆ ರಾಜ್ಯಗಳಲ್ಲಿ ಆಗುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಎಲ್ಲಿ ಸರ್ಕಾರ ರಚಿಸುತ್ತದೆಯೋ, ಆ ರಾಜ್ಯವು ರಾಯಲ್ ಕುಟುಂಬದ (ಗಾಂಧಿ ಕುಟುಂಬ) ಎಟಿಎಂ ಆಗಿ ಕೆಲಸ ಮಾಡುತ್ತದೆ. ಹಿಮಾಚಲ ಪ್ರದೇಶ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳು ಆ ಕುಟುಂಬದ ಎಟಿಎಂಗಳಾಗಿವೆ ಎಂದು ದೂರಿದರು.
ಕೋಟಿ ಬಾಚಿದ ಸಿದ್ದರಾಮಯ್ಯ ಸರ್ಕಾರ: ಮಹಾರಾಷ್ಟ್ರ ಚುನಾವಣೆಗಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರವು, ಮದ್ಯ ಮಾರಾಟದಲ್ಲಿ 700 ಕೋಟಿ ರೂಪಾಯಿ ಅಕ್ರಮ ನಡೆಸಿದೆ ಎಂದು ಅಲ್ಲಿನ ಜನರು ಆರೋಪಿಸಿದ್ದಾರೆ. ಒಂದು ವೇಳೆ ಆ ಪಕ್ಷ ಮಹಾರಾಷ್ಟ್ರದಲ್ಲಿ ಗೆದ್ದರೆ, ಇನ್ನೆಷ್ಟು ಲೂಟಿ ಮಾಡಬಹುದು ಯೋಚಿಸಿ ಎಂದು ಸಭಿಕರಿಗೆ ಮೋದಿ ಹೇಳಿದರು.
ಅಘಾಡಿ ವಿರುದ್ಧ ಗುಡುಗಿದ ಮೋದಿ: ಇನ್ನು, ಕಾಂಗ್ರೆಸ್, ಶಿವಸೇನೆ (ಠಾಕ್ರೆ ಬಣ), ಎನ್ಸಿಪಿ (ಶರದ್ ಪವಾರ್ ಬಣ) ಮೈತ್ರಿಯ ಮಹಾ ವಿಕಾಸ್ ಅಘಾಡಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಪ್ರಧಾನಿ, ವಿಪಕ್ಷಗಳ ಈ ಮೈತ್ರಿಯು ಭ್ರಷ್ಟಾಚಾರ, ಬಹುಕೋಟಿ ಹಗರಣ ಮತ್ತು ಸುಲಿಗೆಯ ಮೇಲೆ ನಿಂತಿವೆ ಎಂಬುದು ದೇಶಕ್ಕೇ ಗೊತ್ತಿರುವ ವಿಚಾರ. ವರ್ಗಾವಣೆ ದಂಧೆ, ಹಗರಣಗಳು ಮತ್ತು ಲೂಟಿಗೆ ಪರ್ಯಾಯ ಪದ ಈ ಮಹಾ ವಿಕಾಸ್ ಅಘಾಡಿಯಾಗಿದೆ ಎಂದು ಕಟುವಾಗಿ ಟೀಕಿಸಿದರು.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20 ರಂದು ಮತದಾನ ನಡೆಯಲಿದೆ. ನವೆಂಬರ್ 23 ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: ಕಾಂಗ್ರೆಸ್ - ಇಂಡಿಯಾ ಕೂಟಕ್ಕೆ ಶಕ್ತಿ ಬಂದರೆ, ದೇಶ ದುರ್ಬಲವಾಗುತ್ತೆ: ಪ್ರಧಾನಿ ಮೋದಿ