ಛತ್ರಪತಿ ಸಂಭಾಜಿನಗರ (ಮಹಾರಾಷ್ಟ್ರ) :'ಜನ ಗಣ ಮನ' ಬದಲಿಗೆ 'ವಂದೇ ಮಾತರಂ' ಭಾರತದ ರಾಷ್ಟ್ರಗೀತೆಯಾಗಬೇಕು. ಇದಕ್ಕಾಗಿ ದೇಶದಲ್ಲಿ ಹೋರಾಟ ಸಂಘಟಿಸಬೇಕಿದೆ ಎಂದು ಧಾರ್ಮಿಕ ಮುಖಂಡ ರಾಮಗಿರಿ ಮಹಾರಾಜ್ ಹೇಳಿದ್ದಾರೆ.
'ಮಿಷನ್ ಅಯೋಧ್ಯೆ' ಸಿನಿಮಾದ ಟ್ರೇಲರ್ ಬಿಡುಗಡೆಗೆ ಮಹಾರಾಷ್ಟ್ರಕ್ಕೆ ಬಂದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಬಂಕಿಮ್ಚಂದ್ರ ಚಟರ್ಜಿ ಅವರು ರಚಿಸಿರುವ ವಂದೇ ಮಾತರಂ ನಮ್ಮ ರಾಷ್ಟ್ರಗೀತೆಯಾಗಬೇಕು ಎಂಬುದು ನಮ್ಮ ನಿಲುವು. ಇದಕ್ಕಾಗಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸುವ ಕಾಲ ಬಂದಿದೆ ಎಂದರು.
ಸದ್ಯ ರಾಷ್ಟ್ರಗೀತೆಯಾಗಿರುವ, ರವೀಂದ್ರನಾಥ ಟ್ಯಾಗೋರ್ ಅವರು ಬರೆದಿರುವ 'ಜನ ಗಣ ಮನ' ಹಾಡನ್ನು 1911 ರಲ್ಲಿ ಅವರು ಕೋಲ್ಕತ್ತಾದಲ್ಲಿ ಹಾಡಿದ್ದರು. ಅಂದು ರಾಷ್ಟ್ರವು ಸ್ವತಂತ್ರವಾಗಿರಲಿಲ್ಲ. ದೇಶವನ್ನು ಒಕ್ಕಲೆಬ್ಬಿಸಿದ್ದ ಬ್ರಿಟಿಷ್ ರಾಜ ಐದನೇ ಜಾರ್ಜ್ ಮುಂದೆ ಅನ್ಯಾಯದ ವಿರುದ್ಧ ಈ ಹಾಡನ್ನು ಹಾಡಲಾಗಿತ್ತು. ದೇಶವನ್ನು ಪ್ರತಿನಿಧಿಸುವ ಗೀತೆ ಇದಾಗಿರಲಿಲ್ಲ ಎಂದು ರಾಮಗಿರಿ ಮಹಾರಾಜರು ಪ್ರತಿಪಾದಿಸಿದರು.
ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಗೌರವ ಅಥವಾ ಅಗೌರವದ ಪ್ರಶ್ನೆಯಲ್ಲ. ಸತ್ಯವನ್ನು ಹೇಳುವ ರೀತಿಯಾಗಿದೆ. ಸತ್ಯ ಹೇಳಿದ್ದೇ ಅಗೌರವ ಎಂದಾದರೆ, ಅದಕ್ಕಿಂತ ದುರದೃಷ್ಟಕರ ಸಂಗತಿ ಇನ್ನೊಂದಿಲ್ಲ ಎಂದು ಅವರು ಹೇಳಿದರು.
ರವೀಂದ್ರನಾಥ ಠಾಗೋರ್ ಅವರು ಮೂಲತಃ ಬಂಗಾಳಿಯಲ್ಲಿ ರಚಿಸಲಾದ 'ಜನ ಗಣ ಮನ' ಗೀತೆಯನ್ನು ಹಿಂದಿ ಭಾಷೆಯಲ್ಲಿ ರೂಪಿಸಿ, 1950ರ ಜನವರಿ 24 ರಂದು ಸಂವಿಧಾನ ಸಮಿತಿಯು ರಾಷ್ಟ್ರಗೀತೆಯನ್ನಾಗಿ ಅಳವಡಿಸಿಕೊಳ್ಳಲು ಒಪ್ಪಿಗೆ ನೀಡಿತ್ತು. ಅಂದಿನಿಂದ ನಾವು ಇದೇ ಹಾಡನ್ನೇ ರಾಷ್ಟ್ರಗೀತೆಯಾಗಿ ಬಳಸುತ್ತಿದ್ದೇವೆ.
ಎನ್ಸಿಪಿ ತೀವ್ರ ಆಕ್ಷೇಪ:ರಾಮಗಿರಿ ಮಹಾರಾಜ್ರ ಈ ಹೇಳಿಕೆಗೆ ಶರದ್ ಪವಾರ್ ಅವರ ಬಣದ ಎನ್ಸಿಪಿ ಶಾಸಕ ಜಿತೇಂಧ್ರ ಅವ್ಹಾದ್ ಅವರು ಕಟುವಾಗಿ ಟೀಕಿಸಿದ್ದಾರೆ. ರಾಷ್ಟ್ರಗೀತೆಯನ್ನು ಬದಲಿಸುವ ಕಾಲ ಬಂದಿದೆ ಎಂದು ಹೇಳಿರುವ ರಾಮಗಿರಿ ಮಹಾರಾಜರಿಗೆ ತಕ್ಕಶಾಸ್ತಿ ಮಾಡುವ ಸಮಯ ಬಂದಿದೆ. ಈಗ ಅವರು 'ಜನ ಗಣ ಮನ'ಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಂದೊಂದು ದಿನ ಅವರು ಗೀತೆಯನ್ನೇ ನಿಷೇಧಿಸಿ ಎಂದರೂ ಅಚ್ಚರಿಯಿಲ್ಲ. ಇದು ಮಹಾರಾಜರ ಅತಿರೇಕದ ವರ್ತನೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ:ಶೀಶ್ ಮಹಲ್ ವಿವಾದ; ದೆಹಲಿ ಸಿಎಂ ನಿವಾಸ ಪ್ರವೇಶಕ್ಕೆ ಮುಂದಾದ ಆಪ್ ನಾಯಕರ ತಡೆದ ಪೊಲೀಸರು