ಬೆಳಗಾವಿ : ತಾಲೂಕಿನ ತಾರಿಹಾಳ ಗ್ರಾಮದಲ್ಲಿ ಸಾಲ ತುಂಬದ ಹಿನ್ನೆಲೆ ಮನೆಗೆ ಬೀಗ ಜಡಿದು ಬಾಣಂತಿ, ಹಸುಗೂಸು ಮತ್ತು ಮನೆಯವರನ್ನೆಲ್ಲ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಹೊರ ಹಾಕಿದ ವಿಚಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೂಚನೆ ಮೇರೆಗೆ ಆ ಕುಟುಂಬಕ್ಕೆ ವಾಪಸ್ ಮನೆಯನ್ನು ಹಸ್ತಾಂತರಿಸಲಾಗಿದೆ.
ತಾರಿಹಾಳ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿತ್ತು. ಗಣಪತಿ ರಾಮಚಂದ್ರ ಲೋಹಾರ್ ಅವರ ಮನೆ ಜಪ್ತಿ ಪಡಿಸಿಕೊಂಡಿದ್ದ ಫೈನಾನ್ಸ್ ಸಿಬ್ಬಂದಿ, ಬಾಣಂತಿ, ಹಸುಗೂಸು ಅಂತಾನೂ ನೋಡದೇ ಪಾತ್ರೆ, ಬಟ್ಟೆಗಳನ್ನು ಹೊರಗೆ ಎಸೆದು ಮನೆಗೆ ಬೀಗ ಜಡಿದು, ಮನೆ ಹರಾಜಿಗಿದೆ ಎಂದು ಬರೆದಿದ್ದರು. ಬಳಿಕ ದಿಕ್ಕೆ ತೋಚದಂತಾಗಿ ಮನೆ ಪಕ್ಕದ ಶೆಡ್ನಲ್ಲಿ ಬಾಣಂತಿ, ಹಸಗೂಸು ಕೆಲಕಾಲ ಕಳೆದಿದ್ದರು.
ಫೈನಾನ್ಸ್ನವರ ಜತೆ ಮಾತಾಡಿ ಮನೆ ವಾಪಸ್ ಕೊಡಿಸಿದ ಸಚಿವೆ: ಈ ವಿಚಾರ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗಮನಕ್ಕೆ ಬರುತ್ತಿದ್ದಂತೆ ಅವರ ಆಪ್ತಸಹಾಯಕರ ಮೂಲಕ ಖಾಸಗಿ ಫೈನಾನ್ಸ್ನವರ ಜೊತೆಗೆ ಮಾತಾಡಿ, ಮನೆಯನ್ನು ವಾಪಸ್ ಕೊಡಿಸಿದ್ದಾರೆ. ವಾಪಸ್ ತಮ್ಮ ಮನೆಗೆ ಬರುತ್ತಿದ್ದಂತೆ ಇಡೀ ಕುಟುಂಬ ಭಾವುಕವಾಗಿತ್ತು. ಅಲ್ಲದೇ ಲಕ್ಷ್ಮಿ ಹೆಬ್ಬಾಳ್ಕರ್ ಕಾರ್ಯಕ್ಕೆ ಹೃದಯಪೂರ್ವಕ ಧನ್ಯವಾದ ಸಲ್ಲಿಸುತ್ತೇವೆ ಎಂದರು.
ಈ ಕುರಿತು ಮಾತನಾಡಿದ ಬಾಣಂತಿ ಮಧು ಬಡಿಗೇರ, ನಿನ್ನೆ ರಾತ್ರಿ ಹೊರಗಡೆ ನಮಗೆ ಮಲಗಲು ಆಗಲಿಲ್ಲ. ಹಾಗಾಗಿ, ನಮ್ಮ ಚಿಕ್ಕಪ್ಪ ರಾತ್ರಿ ಕಿತ್ತೂರು ತಾಲೂಕಿನ ನಿಚ್ಚಣಕಿ ಗ್ರಾಮದ ಅವರ ಮನೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹಣ್ಣು-ಹಂಪಲು ಕೊಟ್ಟು ಕಳಿಸಿದ್ದರು. ಅಲ್ಲದೇ ಫೈನಾನ್ಸ್ ಕಡೆಯಿಂದ ಮನೆ ಕೀಲಿ ವಾಪಸ್ ಕೊಡಿಸಿದ್ದಾರೆ. ಹಾಗಾಗಿ, ಹೆಬ್ಬಾಳ್ಕರ್ ಮೇಡಂ ಮತ್ತು ನಮ್ಮೂರಿನ ಮುಖಂಡರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.
ಮನೆ ವಾಪಸ್ ಕೊಡಿಸಿದ್ದಕ್ಕೆ ಸಂತಸ: ಮಧು ತಂದೆ ಗಣಪತಿ ಲೋಹಾರ ಮಾತನಾಡಿ, ನಮಗೆ ವಾಪಸ್ ಮನೆ ಕೊಡಿಸಿದ್ದಾರೆ. ತುಂಬಾ ಸಂತೋಷ ಆಗುತ್ತಿದೆ. ಹಣ ತುಂಬಲು 2-3 ತಿಂಗಳು ಸಮಯ ಕೊಟ್ಟಿದ್ದಾರೆ. ನಮಗೆ ಆದ ಪರಿಸ್ಥಿತಿ ಯಾರಿಗೂ ಬರಬಾರದು. ಇನ್ನೊಮ್ಮೆ ಫೈನಾನ್ಸ್ನಲ್ಲಿ ಸಾಲ ಮಾಡುವುದಿಲ್ಲ. ಹೆಬ್ಬಾಳ್ಕರ್ ಮೇಡಂ ಅವರಿಗೆ ನಾನು ಎಷ್ಟು ಧನ್ಯವಾದ ಸಲ್ಲಿಸಿದರೂ ಕಡಿಮೆಯೇ ಎಂದು ಭಾವುಕರಾದರು.
ಮಧು ತಾಯಿ ಸುವರ್ಣಾ ಅವರು ಮಾತನಾಡಿ, ಇಂದು ಬೆಳಗ್ಗೆ ತಾರಿಹಾಳಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪಿಎ ಬಂದು ವಿಚಾರಿಸಿದ್ದಾರೆ. ಆದರೆ, ನಾವು ನಿಚ್ಚಣಕಿಯಲ್ಲಿ ಇದ್ದೆವು. ಅಲ್ಲಿಂದ ನಮ್ಮನ್ನು ವಾಪಸ್ ಕರೆದುಕೊಂಡು ಬಂದು ಮನೆ ಕೊಡಿಸಿದ್ದಾರೆ. ಫೈನಾನ್ಸ್ ಸಿಬ್ಬಂದಿ ಮನೆ ಕೀಲಿ ತೆಗೆದರು. ನಮಗೆ ತುಂಬಾ ಖುಷಿಯಾಗುತ್ತಿದೆ ಎಂದು ಹೇಳಿದರು.
ಲಕ್ಷ್ಮಿ ಹೆಬ್ಬಾಳ್ಕರ್ ಆಪ್ತ ಸಹಾಯಕ ಮಹಾಂತೇಶ ಮಾತನಾಡಿ, ದುಡ್ಡು ತುಂಬಲು ಕಾಲಾವಕಾಶ ನೀಡುವಂತೆ ಫೈನಾನ್ಸ್ ಸಿಬ್ಬಂದಿ ಜೊತೆಗೆ ಮಾತಾಡಿದಾಗ ಅವರು ವಾಪಸ್ ಮನೆ ಕೊಡಲು ಒಪ್ಪಿದರು. ಸ್ಥಳೀಯ ಸಿಡಿಪಿಒ ಅವರ ಮೂಲಕ ಬಾಣಂತಿ, ಹಸುಗೂಸು ಮತ್ತು ಅವರ ತಂದೆ-ತಾಯಿಯನ್ನು ಮನೆಗೆ ಬಿಟ್ಟಿದ್ದೇವೆ. ಫೈನಾನ್ಸ್ನವರು ಸಾಲದ ಅಸಲು ಅಷ್ಟೇ ತುಂಬಿ, ಬಡ್ಡಿ ಏನೂ ಬೇಡ ಎಂದು ತಿಳಿಸಿದ್ದಾರೆ ಎಂದರು.
ಕಳೆದ ಐದು ವರ್ಷಗಳ ಹಿಂದೆ ಆಪ್ಟಸ್ ವ್ಯಾಲ್ಯೂ ಹೌಸಿಂಗ್ ಎಂಬ ಫೈನಾನ್ಸ್ನಲ್ಲಿ ಗಣಪತಿ ಲೋಹಾರ್ 5 ಲಕ್ಷ ರೂ. ಸಾಲ ಪಡೆದಿದ್ದರು. ಬಳಿಕ ಮೂರು ವರ್ಷಗಳ ಕಾಲ ನಿರಂತರ ಕಂತು ತುಂಬಿದ್ದರು. ಆದರೆ, ಅನಾರೋಗ್ಯ ಮತ್ತು ಮಗಳ ಹೆರಿಗೆ ಹಿನ್ನೆಲೆಯಲ್ಲಿ ಕಳೆದ 6 ತಿಂಗಳಿಂದ ಕಂತು ತುಂಬಿರಲಿಲ್ಲ. ಹಾಗಾಗಿ, ನಿನ್ನೆ ಏಕಾಏಕಿ ಪೊಲೀಸರು ಹಾಗೂ ವಕೀಲರ ಸಮ್ಮುಖದಲ್ಲೇ ಮನೆಯನ್ನು ಫೈನಾನ್ಸ್ ಸಿಬ್ಬಂದಿ ಜಪ್ತಿ ಪಡಿಸಿಕೊಂಡಿದ್ದರು.
ಇದನ್ನೂ ಓದಿ : ಬಾಣಂತಿ, ಹಸುಗೂಸು ಹೊರಹಾಕಿ ಮನೆ ಜಪ್ತಿ ಘಟನೆ: ಸಚಿವ ಜಾರಕಿಹೊಳಿ, ಡಿಸಿ ಪ್ರತಿಕ್ರಿಯೆ - MICRO FINANCE TORTURE