ಡೆಹ್ರಾಡೂನ್ (ಉತ್ತರಾಖಂಡ):ತಜ್ಞರ ಸಮಿತಿಯು ಇತ್ತೀಚಿಗೆ ನೀಡಿದ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ವರದಿಯನ್ನು ಉತ್ತರಾಖಂಡ ಸರ್ಕಾರ ಭಾನುವಾರ ಅಂಗೀಕರಿಸಿದೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನಿವಾಸದಲ್ಲಿ ನಡೆದ ಸಚಿವ ಸಂಪುಟ ವರದಿಗೆ ಒಪ್ಪಿಗೆ ನೀಡಿತು. ಫೆಬ್ರವರಿ 6 ರಿಂದ ಆರಂಭವಾಗಲಿರುವ ವಿಧಾನಸಭೆ ಅಧಿವೇಶನದಲ್ಲಿ ಇದನ್ನು ಮಸೂದೆಯಾಗಿ ಮಂಡನೆಯಾಗುವ ಸಾಧ್ಯತೆಯಿದೆ.
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರ ನೇತೃತ್ವದ ಯುಸಿಸಿ ಕರಡು ಸಮಿತಿಯು ಶುಕ್ರವಾರವಷ್ಟೇ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ವರದಿಯನ್ನು ಸಲ್ಲಿಸಿತ್ತು. ಇಂದು ನಡೆದ ಸಭೆಯಲ್ಲಿ ಸಂಪುಟವು ವರದಿಗೆ ಅಸ್ತು ಎಂದಿದೆ.
ಯುಸಿಸಿ ವರದಿ ರಚನೆ ಮಾಹಿತಿ:ಚುನಾವಣೆಗೂ ಮೊದಲು ಉತ್ತರಾಖಂಡ ಬಿಜೆಪಿಯು ಯುಸಿಸಿ ಜಾರಿ ಬಗ್ಗೆ ಭರವಸೆ ನೀಡಿತ್ತು. ಅದರಂತೆ ಅಧಿಕಾರಕ್ಕೆ ಬಂದ ಬಳಿಕ 2022ರ ಮೇ 27 ರಂದು ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರ ನೇತೃತ್ವದಲ್ಲಿ ಏಕರೂಪ ನಾಗರಿಕ ಸಂಹಿತೆ ಕುರಿತ ಅಧ್ಯಯನಕ್ಕೆ ಸಮಿತಿಯನ್ನು ರಚಿಸಿತು. ಇದರಲ್ಲಿ ಸಿಕ್ಕೀಂ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಪ್ರಮೋದ್ ಕೊಹ್ಲಿ, ಸಮಾಜ ಸೇವಕ ಮನು ಗೌರ್, ಉತ್ತರಾಖಂಡದ ಮಾಜಿ ಮುಖ್ಯ ಕಾರ್ಯದರ್ಶಿ ಶತ್ರುಘ್ನ ಸಿಂಗ್ ಮತ್ತು ಡೂನ್ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಸುರೇಖಾ ದಂಗವಾಲ್ ಅವರು ಇದ್ದಾರೆ.
ಸಮಿತಿಯು 19 ತಿಂಗಳ ಅಧ್ಯಯನದ ಬಳಿಕ ಫೆಬ್ರವರಿ 2, 2024 ರಂದು ಕರಡು ಪ್ರತಿಯನ್ನು ಸರ್ಕಾರಕ್ಕೆ ನೀಡಿತು. ಅದರಲ್ಲಿ 2.33 ಲಕ್ಷ ಲಿಖಿತ ಸಲಹೆಗಳನ್ನು ಸ್ವೀಕರಿಸಲಾಗಿದೆ. ಕರಡು ಸಿದ್ಧಪಡಿಸುವ ಸಂದರ್ಭದಲ್ಲಿ ಸಮಿತಿಯು ಸುಮಾರು 60,000 ಜನರೊಂದಿಗೆ ಸಂವಾದ ನಡೆಸಿದೆ. 60 ಸಭೆಗಳನ್ನು ನಡೆಸಿದೆ. ಸಮಾಜದ ಪ್ರತಿಯೊಂದು ವರ್ಗದಿಂದ ಸಲಹೆಗಳನ್ನು ಪಡೆಯಲು ತಂತ್ರಜ್ಞಾನದ ಸಹಾಯವನ್ನು ಪಡೆದ ಸಮಿತಿ, ವೆಬ್ ಪೋರ್ಟಲ್ ಆರಂಭಿಸಿತ್ತು.
SMS ಮತ್ತು WhatsApp ಸಂದೇಶಗಳ ಮೂಲಕ ರಾಜ್ಯದ ಎಲ್ಲಾ ನಾಗರಿಕರಿಂದ ಸಲಹೆಗಳನ್ನು ಆಹ್ವಾನಿಸಿತ್ತು. ರಾಜ್ಯದ ಶೇ.10ರಷ್ಟು ಕುಟುಂಬಗಳ ಅಭಿಪ್ರಾಯಗಳನ್ನು ಕರಡಿನಲ್ಲಿ ದಾಖಲಿಸಲಾಗಿದೆ. ಈ ಕಾನೂನು ಜಾರಿಯಾದರೆ ಸ್ವಾತಂತ್ರ್ಯ ನಂತರ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಉತ್ತರಾಖಂಡ ಪಾತ್ರವಾಗಲಿದೆ.
ಏನಿದು ಯುಸಿಸಿ?:ಯಾವುದೇ ಜಾತಿ, ಧರ್ಮ, ಪ್ರಾಂತ್ಯವೆಂಬ ಭೇದ ಮಾಡದೆ ದೇಶದ ಎಲ್ಲರಿಗೂ ಒಂದೇ ಕಾನೂನು ಇರಬೇಕು ಅನ್ನೋದೇ ಏಕರೂಪ ನಾಗರಿಕ ಸಂಹಿತೆ. ಸಂವಿಧಾನದ ಆರ್ಟಿಕಲ್ 44ರ ಆಶಯಕ್ಕೆ ಅನುಗುಣವಾಗಿದೆ. ಇಡೀ ದೇಶಕ್ಕೆ ಏಕರೂಪದ ಕಾನೂನಿನ ಜೊತೆಗೆ ಮದುವೆ, ವಿಚ್ಛೇದನ, ಉತ್ತರಾಧಿಕಾರ, ದತ್ತು ಸ್ವೀಕಾರದ ನಿಯಮಗಳು ಎಲ್ಲಾ ಧಾರ್ಮಿಕ ಸಮುದಾಯಗಳಿಗೆ ಒಂದೇ ಆಗಿರುತ್ತದೆ.
ಇದನ್ನೂ ಓದಿ:ಉತ್ತರಾಖಂಡ ಸರ್ಕಾರಕ್ಕೆ ಏಕರೂಪ ನಾಗರಿಕ ಸಂಹಿತೆಯ ಅಂತಿಮ ಕರಡು ಸಲ್ಲಿಕೆ