ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಸಂಪೂರ್ಣ ಪಾನ ನಿಷೇಧ ಘೋಷಿಸಬೇಕೆಂಬ ಕೂಗು ಬಲವಾಗುತ್ತಿದ್ದು, ಮದ್ಯಪಾನ ನಿಷೇಧಿಸುವಂತೆ ಕೋರಿ ಕನಿಷ್ಠ ಮೂವರು ಶಾಸಕರು ವಿಧಾನಸಭೆಯಲ್ಲಿ ಖಾಸಗಿ ಸದಸ್ಯರ ಮಸೂದೆಗಳನ್ನು ಸಲ್ಲಿಸಿದ್ದಾರೆ.
ಕುಪ್ವಾರಾದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಶಾಸಕ ಮಿರ್ ಮೊಹಮ್ಮದ್ ಫಯಾಜ್, ಲಂಗಟೆಯ ಅವಾಮಿ ಇತ್ತೆಹಾದ್ ಪಕ್ಷದ (ಎಐಪಿ) ಶಾಸಕ ಶೇಖ್ ಖುರ್ಷಿದ್ ಅಹ್ಮದ್ ಮತ್ತು ಲಾಲ್ ಚೌಕ್ನ ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಶಾಸಕ ಅಹ್ಸಾನ್ ಪರ್ದೇಸಿ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಮದ್ಯ ನಿಷೇಧಕ್ಕಾಗಿ ಪ್ರತ್ಯೇಕ ಖಾಸಗಿ ಸದಸ್ಯರ ಮಸೂದೆಗಳನ್ನು ಸಲ್ಲಿಸಿದ್ದಾರೆ.
ಮಾರ್ಚ್ 3 ರಿಂದ ಬಜೆಟ್ ಅಧಿವೇಶನಕ್ಕಾಗಿ ಜಮ್ಮುವಿನಲ್ಲಿ ನಡೆಯಲಿರುವ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಮುಂಬರುವ ಅಧಿವೇಶನದಲ್ಲಿ ಮಸೂದೆಗಳನ್ನು ಮಂಡಿಸಲಾಗುವುದು.
"ಮದ್ಯಪಾನವು ಜಮ್ಮು ಮತ್ತು ಕಾಶ್ಮೀರದಾದ್ಯಂತ ಜನರ ಜೀವನವನ್ನು ಹಾಳು ಮಾಡುತ್ತಿದೆ ಮತ್ತು ನಮ್ಮ ಸಾಮಾಜಿಕ ವ್ಯವಸ್ಥೆಗೆ ಗಂಭೀರ ಅಪಾಯವನ್ನುಂಟು ಮಾಡುತ್ತಿದೆ. ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಮದ್ಯದಂಗಡಿಗಳ ಕಾರಣದಿಂದಾಗಿ 2019 ರಿಂದ ಎಲ್ಲಿ ಬೇಕಾದರೂ ಮದ್ಯ ಲಭ್ಯವಾಗುತ್ತಿರುವುದರಿಂದ ಸಮಸ್ಯೆ ಹೆಚ್ಚಾಗಿದೆ. ಮದ್ಯಪಾನ ನಿಷೇಧ ಕೋರಿ ಖಾಸಗಿ (ಸದಸ್ಯರ) ಮಸೂದೆಯನ್ನು ಮಂಡಿಸಿದ ಪಿಡಿಪಿ ಶಾಸಕ ಮಿರ್ ಮೊಹಮ್ಮದ್ ಫಯಾಜ್ ಅವರಿಗೆ ಅಭಿನಂದನೆಗಳು. ಈ ನಿಟ್ಟಿನಲ್ಲಿ ಇನ್ನಷ್ಟು ಪ್ರಯತ್ನಗಳಾಗಲಿ" ಎಂದು ಪಿಡಿಪಿ ನಾಯಕಿ ಇಲ್ತಿಜಾ ಮುಫ್ತಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಆಧ್ಯಾತ್ಮಿಕವಾಗಿ ಶ್ರೀಮಂತವಾಗಿರುವ ನಮ್ಮ ಸಮಾಜದಲ್ಲಿ ಮದ್ಯಕ್ಕೆ ಸ್ಥಾನವಿಲ್ಲ. 'ರೇಶ್ವಾರ್' (ಸಂತರ ನಾಡು) ಎಂದು ಕರೆಯಲ್ಪಡುವ ಭೂಮಿಯನ್ನು ಮದ್ಯದ ವ್ಯಾಪಾರದಿಂದ ಕಳಂಕಿತಗೊಳಿಸಬಾರದು. 2009 ರಿಂದ ಎಂಜಿನಿಯರ್ ರಶೀದ್ ಈ ಪಿಡುಗಿನ ವಿರುದ್ಧ ಹೋರಾಡುತ್ತಿದ್ದಾರೆ ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ಮದ್ಯಮುಕ್ತ ರಾಜ್ಯವೆಂದು ಘೋಷಿಸುವ ಧ್ಯೇಯಕ್ಕೆ ಎಐಪಿ ಬದ್ಧವಾಗಿದೆ" ಎಂದು ಶೇಖ್ ಅಬ್ದುಲ್ ರಶೀದ್ ಅಥವಾ ಎಂಜಿನಿಯರ್ ರಶೀದ್ ನೇತೃತ್ವದ ಪಕ್ಷದ ವಕ್ತಾರರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಸಂಖ್ಯಾತ ಕುಟುಂಬಗಳ ಸರ್ವನಾಶಕ್ಕೆ ಕಾರಣವಾಗಿರುವ ಆನ್ ಲೈನ್ ಗೇಮಿಂಗ್ ಅನ್ನು ಕೂಡ ನಿಷೇಧಿಸಬೇಕೆಂದು ಎಐಪಿ ಹೋರಾಡುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮದ್ಯಪಾನ ನಿಷೇಧ ಕೋರಿ ಖಾಸಗಿ ಸದಸ್ಯರ ಮಸೂದೆಯನ್ನು ಸಲ್ಲಿಸಿರುವುದಾಗಿ ಪರ್ದೇಸಿ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ.