ಕರ್ನಾಟಕ

karnataka

ETV Bharat / bharat

ಮಂಗನ ದಾಳಿಗೆ ಮಹಿಳೆ ಬಲಿ; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ - Agra News

ಮಂಗನ ದಾಳಿಯಿಂದ ಆಗ್ರಾದಲ್ಲಿ ಮಹಿಳೆ ಸಾವನ್ನಪ್ಪಿದ್ದಾರೆ. ಪುರಸಭೆ ನಿರ್ಲಕ್ಷ್ಯದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಶಾಸಕರ ಮನೆ ಮುಂದೆ ಪ್ರತಿಭಟನೆ ಕೂಡಾ ನಡೆದಿದೆ.

uttar-pradesh-woman-killed-in-monkey-attack
uttar-pradesh-woman-killed-in-monkey-attack

By ETV Bharat Karnataka Team

Published : Feb 13, 2024, 1:38 PM IST

ಆಗ್ರಾ (ಉತ್ತರ ಪ್ರದೇಶ): ಯಾವಾಗಲೂ ಜನರಿಗೆ ತೊಂದರೆ ಕೊಡುತ್ತಿದ್ದ ದಾಳಿಕೋರ ಕೋತಿಯೊಂದು ಮಹಿಳೆಯ ಪ್ರಾಣವನ್ನೇ ತೆಗೆದ ಘಟನೆ ಆಗ್ರಾದಲ್ಲಿ ನಡೆದಿದೆ. ಕೋತಿಯ ದಾಳಿಯಿಂದ ಮಹಿಳೆಯೊಬ್ಬಳು ಎರಡನೇ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾಳೆ. ಸೋಮವಾರ ಈ ಘಟನೆ ನಡೆದಿದೆ. ಮೃತ ಮಹಿಳೆಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಹಿಳೆ ಸಾವಿನಿಂದ ಆಕೆಯ ಹೆಣ್ಣು ಮಕ್ಕಳು ತಬ್ಬಲಿಯಾಗಿದ್ದಾರೆ.

ಆಗ್ರಾ ಉತ್ತರ ಶಾಸಕ ಪುರುಷೋತ್ತಮ್ ಖಂಡೇಲ್ವಾಲ್ ಅವರ ಮನೆಯ ಸಮೀಪ ಇರುವ ಚಂದಾ ವಾಲಿ ಗಲ್ಲಿಯಲ್ಲಿ ಮಹೇಂದ್ರ ಸಿಂಗ್ ಎಂಬುವರು ವಾಸಿಸುತ್ತಾರೆ. ಮಹೇಂದ್ರ ಅವರ ಪತ್ನಿ ಚಂದ್ರಾವತಿ ಅಲಿಯಾಸ್ ಚಂದಾ ತಮ್ಮ ಎರಡು ಅಂತಸ್ತಿನ ಮನೆಯ ಟೆರೇಸ್ ನಲ್ಲಿ ಬಟ್ಟೆ ಒಣಗಲು ಹಾಕುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಕೋತಿಗಳ ಹಿಂಡು ಬಂದಿದೆ.

ಅದರಲ್ಲೊಂದು ಕ್ರೂರ ಕೋತಿಯು ಚಂದ್ರಾವತಿಯ ಮೇಲೆ ದಾಳಿ ಮಾಡಿದೆ. ಚಂದ್ರಾವತಿ ಕೋತಿಯ ದಾಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಆಯ ತಪ್ಪಿ ಎರಡು ಅಂತಸ್ತಿನ ಛಾವಣಿಯಿಂದ ಕೆಳಗೆ ಬಿದ್ದಿದ್ದಾರೆ. ರಕ್ತಸಿಕ್ತ ಸ್ಥಿತಿಯಲ್ಲಿದ್ದ ಚಂದ್ರಾವತಿಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಚಂದ್ರಾವತಿ ಅವರಿಗೆ ನಾಲ್ವರು ಪುತ್ರಿಯರು ಮತ್ತು ಒಬ್ಬ ಪುತ್ರ ಇದ್ದಾರೆ. ಇದರಲ್ಲಿ ಇಬ್ಬರು ಹೆಣ್ಣುಮಕ್ಕಳು ಅವಿವಾಹಿತರಾಗಿದ್ದಾರೆ. ಕೋತಿಗಳ ದಾಳಿಯಲ್ಲಿ ಚಂದ್ರಾವತಿ ಸಾವನ್ನಪ್ಪಿದ ಸುದ್ದಿ ಕೇಳಿ ಇಡೀ ಪ್ರದೇಶದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಉದ್ರಿಕ್ತ ಜನತೆ ಭೈರೋನ್ ಬಜಾರ್ ನಲ್ಲಿರುವ ಶಾಸಕರ ಮನೆಯ ಬಳಿ ಪ್ರತಿಭಟನೆ ಕೂಡಾ ನಡೆಸಿದ್ದಾರೆ. ಕೋತಿಗಳನ್ನು ಹಿಡಿಯುವಲ್ಲಿ ಪುರಸಭೆ ನಿರ್ಲಕ್ಷ್ಯ ವಹಿಸಿದೆ ಎಂದು ಮಾಜಿ ಕಾರ್ಪೊರೇಟರ್ ಮನೋಜ್ ಸೋನಿ ಆರೋಪಿಸಿದ್ದಾರೆ. ಈ ಹಿಂದೆ ಮಂಗನ ದಾಳಿಯಿಂದ ಅನೇಕ ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು.

ಈ ಪ್ರದೇಶದಲ್ಲಿ ಕೋತಿಗಳ ಹಾವಳಿ ವಿಪರೀತವಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಪ್ರತಿದಿನ ಕೋತಿಗಳು ಒಬ್ಬರ ಮೇಲಾದರೂ ದಾಳಿ ಮಾಡುತ್ತಲೇ ಇರುತ್ತವೆ. ಈ ಬಗ್ಗೆ ಹಲವಾರು ದೂರು ನೀಡಿದರೂ ಏನೂ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ನಗರದ ಬೆಲಂಗಂಜ್, ಭೈರೋನ್ ಬಜಾರ್, ರಾವತ್ಪಾಡಾ, ದರೇಸಿ, ಚಟ್ಟಾ, ಮೋತಿಗಂಜ್, ಆಸ್ಪತ್ರೆ ರಸ್ತೆ, ಮೋತಿ ಕತ್ರಾ, ನೂರಿ ಗೇಟ್, ಕಿನಾರಿ ಬಜಾರ್, ಘಾಟಿಯಾ ಅಜಂ ಖಾನ್ ಮತ್ತು ಯಮುನಾ ಕಿನಾರಾ ರಸ್ತೆಗಳಲ್ಲಿ ಕೋತಿಗಳ ಆತಂಕ ಹೆಚ್ಚಾಗಿದೆ. ಇದರಿಂದಾಗಿ ಜನರು ಮನೆಗಳಿಗೆ ಎಲ್ಲ ಕಡೆಯೂ ಗ್ರಿಲ್ ಅಳವಡಿಸಿಕೊಂಡಿದ್ದು, ಮನೆಗಳು ಪಂಜರಗಳಂತಾಗಿವೆ.

ಆಗ್ರಾದಲ್ಲಿ ಕೋತಿಗಳ ದಾಳಿಯ ಬಗ್ಗೆ ಮುನ್ಸಿಪಲ್ ಕಾರ್ಪೊರೇಷನ್ ಸಭೆಯಲ್ಲಿ ಹಲವಾರು ಬಾರಿ ಚರ್ಚೆಯಾಗಿದೆ. ಮಹಾನಗರ ಪಾಲಿಕೆಯ ಅಭಿಯಾನದಲ್ಲಿ ಈವರೆಗೆ 13181 ಕೋತಿಗಳನ್ನು ಸೆರೆಹಿಡಿಯಲಾಗಿದೆ ಮತ್ತು 6,895 ಕೋತಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಮಂಗನ ದಾಳಿಯ ಹಿಂದಿನ ಪ್ರಕರಣಗಳು:

  • 2018ರಲ್ಲಿ ರುಂಕಟಾದಲ್ಲಿ ಕೋತಿಯೊಂದು ಮಗುವನ್ನು ತಾಯಿಯ ತೊಡೆಯ ಮೇಲಿಂದ ಎಳೆದುಕೊಂಡು ಓಡಿಹೋಗಿತ್ತು. ಈ ಘಟನೆಯಲ್ಲಿ ಮಗು ಪ್ರಾಣ ಕಳೆದುಕೊಂಡಿತ್ತು.
  • 2019 ರಲ್ಲಿ ಮೈಥಾನ್ ನ ಹರಿಶಂಕರ್ ಗೋಯೆಲ್ ಎಂಬುವರು ಮಂಗನ ದಾಳಿಯಿಂದ ಸಾವನ್ನಪ್ಪಿದ್ದರು.
  • 2020ರಲ್ಲಿ ಮಂಗನ ದಾಳಿಗೆ ಮೂವರು ಬಲಿಯಾಗಿದ್ದರು.
  • 2022ರಲ್ಲಿ ಮಂಗನ ದಾಳಿಗೆ ನಾಲ್ವರು ಮೃತಪಟ್ಟಿದ್ದರು.

ಇದನ್ನೂ ಓದಿ : ಗಂಡನೊಂದಿಗೆ ಜಗಳ, ಮೂವರು ಮಕ್ಕಳೊಂದಿಗೆ ನದಿಗೆ ಹಾರಿದ ಮಹಿಳೆ: ಬದುಕುಳಿದ ತಾಯಿ

ABOUT THE AUTHOR

...view details