ಬಹ್ರೈಚ್ (ಉತ್ತರ ಪ್ರದೇಶ): ತಾಯಿಯೊಂದಿಗೆ ಸುಖ ನಿದ್ರೆಯಲ್ಲಿದ್ದ ಐದು ವರ್ಷದ ಮಗು ಸೇರಿದಂತೆ ಬಹ್ರೈಚ್ ಜಿಲ್ಲೆಯಲ್ಲಿ ಒಟ್ಟು ಜನರನ್ನು ತಿಂದು ತೇಗಿರುವ ನರಭಕ್ಷಕ ತೋಳಗಳನ್ನು ಸೆರೆ ಹಿಡಿಯುವ ಕಾರ್ಯಚರಣೆ ಮುಂದುವರೆದಿದ್ದು, ಗುರುವಾರ ಮಗದೊಂದು ತೋಳ ಬಲೆಗೆ ಬಿದ್ದಿದೆ.
ಗ್ರಾಮಸ್ಥರ ನೆರವಿನಿಂದ ಬಹ್ರೈಚ್ ಅರಣ್ಯ ಇಲಾಖೆಯ ಅಧಿಕಾರಿಗಳು ನಡೆಸಿದ ಹಗಲು ರಾತ್ರಿ ಕಾರ್ಯಾಚರಣೆಯ ಬಳಿಕ ಈ ನರಭಕ್ಷಕ ತೋಳ ಸೆರೆಯಾಗಿದೆ. ಹರಸಾಹಸದ ಬಳಿಕ ತೋಳ ಬಲೆಗೆ ಬಿದ್ದಿದ್ದರಿಂದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.
ಕಳೆದ ಮೂರು ತಿಂಗಳಿನಿಂದ ಬಹ್ರೈಚ್ ಜಿಲ್ಲೆಯಲ್ಲಿ ನರಭಕ್ಷಕ ತೋಳಗಳ ಕಾಟ ಮಿತಿಮೀರಿದ್ದು, ಅವುಗಳನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ನಿರಂತರವಾಗಿ ನಿರತವಾಗಿದೆ. ಇಂದು ಬೆಳಗ್ಗೆ ಮತ್ತೊಂದು ತೋಳ ಸಿಕ್ಕಿಬಿದ್ದಿದೆ. ತೋಳಗಳ ದಾಳಿಯಿಂದ ಈ ಭಾಗದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದರಿಂದ ಸ್ಥಳದಲ್ಲೇ ಬೀಡು ಬಿಟ್ಟಿದ್ದ ಅರಣ್ಯ ಇಲಾಖೆ ತಂಡ ಈಗಾಗಲೇ ಮೂರು ತೋಳಗಳನ್ನು ಸೆರೆ ಹಿಡಿದಿತ್ತು. ಆದರೂ, ಅವುಗಳ ದಾಳಿ ಮಾತ್ರ ನಿಂತಿರಲಿಲ್ಲ. ಈಗ ಮತ್ತೊಂದು ತೋಳ ಬಲೆಗೆ ಬಿದ್ದಿದೆ.
ಐದು ವರ್ಷದ ಮಗು ಹೊತ್ತೊಯ್ದ ತೋಳ!:ಇತ್ತೀಚೆಗಷ್ಟೇ ಖೈರಿಘಾಟ್ ಪ್ರದೇಶದಲ್ಲಿ ನರಭಕ್ಷಕ ತೋಳವೊಂದು ದಾಳಿ ಮಾಡಿತ್ತು. ರಾತ್ರಿ ತಾಯಿಯೊಂದಿಗೆ ಸುಖ ನಿದ್ರೆಯಲ್ಲಿದ್ದ ಐದು ವರ್ಷದ ಅಯನಶ್ ಎಂಬ ಮಗುವನ್ನು ಸದ್ದಿಲ್ಲದೇ ಎಳೆದೊಯ್ದು ತಿಂದು ಹಾಕಿತ್ತು. ಮಗುವಿನ ಅಳುವಿನ ಆಕ್ರಂದನ ಕೇಳಿ ತಾಯಿ ಎದ್ದು ನೋಡಿದಾಗ ಕಾಣೆಯಾಗಿತ್ತು. ಅಲ್ಲಲ್ಲಿ ರಕ್ತದ ಕಲೆಗಳು ಬಿದ್ದಿದ್ದರಿಂದ ಪೋಷಕರು ಇದು ತೋಳದ ಕೆಲಸವೆಂದು ಅನುಮಾನ ವ್ಯಕ್ತಪಡಿಸಿದ್ದರು. ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು.
ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ತಂಡದ ಸಿಬ್ಬಂದಿ ರಾತ್ರಿಯಿಡೀ ಮಗುವಿನ ಹುಡುಕಾಟ ನಡೆಸಿತ್ತು. ಮಂಗಳವಾರ ಬೆಳಗ್ಗೆ ಹೊಲದಲ್ಲಿ ಮಗುವಿನ ಮೃತದೇಹ ಪತ್ತೆಯಾಗಿತ್ತು. ಫೋರೆನ್ಸಿಕ್ ತಂಡ ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿತ್ತು. ಸೋಮವಾರಷ್ಟೇ ಹಾರ್ಡಿ ಪೊಲೀಸ್ ಠಾಣೆಯ ಕುಮ್ಹಾರನ್‌ಪುರವಾ ಗ್ರಾಮದಲ್ಲಿ ತೋಳದ ದಾಳಿಯಲ್ಲಿ 45 ವರ್ಷದ ರೀಟಾ ದೇವಿ ಸಹ ಸಾವನ್ನಪ್ಪಿದ್ದರು. ಕೇವಲ ಎರಡು ದಿನಗಳಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದರು.
ಇದಕ್ಕೂ ಮುನ್ನ ಹಲವೆಡೆ ದಾಳಿ ನಡೆಸಿದ ತೋಳಗಳು ಆರು ಮಕ್ಕಳನ್ನು ಬಲಿ ಪಡೆದಿದ್ದವು. ಇವುಗಳ ಹಾವಳಿ ತಡೆಯಲು ಮತ್ತು ಅವುಗಳ ಚಲನವಲನ ಕಂಡು ಹಿಡಿಯಲು ಡ್ರೋನ್‌ಗಳನ್ನು ಬಳಸಲಾಗಿತ್ತು. ಅಖಿಲೇಶ್ ಯಾದವ್ ಅವರು ಕೂಡ ಟ್ವೀಟ್ ಮಾಡಿ ತೋಳಗಳ ದಾಳಿಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಇಂದಿನ ತೋಳ ಸೇರಿದಂತೆ ಒಟ್ಟು ನಾಲ್ಕು ತೋಳಗಳು ಈಗಾಗಲೇ ಸೆರೆಯಾಗಿದ್ದು, ಎರಡು ತೋಳಗಳ ಹುಡುಕಾಟ ಇನ್ನೂ ನಡೆಯುತ್ತಿದೆ.
ಇದನ್ನೂ ಓದಿ:ಬೆಂಗಳೂರು: ಬೀದಿ ನಾಯಿಗಳ ಡೆಡ್ಲಿ ಅಟ್ಯಾಕ್ಗೆ ವೃದ್ಧೆ ಬಲಿ! - Stray Dog Attack