ತಿರುವರೂರು (ತಮಿಳುನಾಡು):ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ದೊಡ್ಡ ಟರ್ನ್ ಸಿಕ್ಕಿದೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದ ಹಾಲಿ ಅಧ್ಯಕ್ಷ ಜೋ ಬೈಡೆನ್ ಚುನಾವಣೆಯಿಂದ ಹಿಂದೆ ಸರಿದು ಉಪಾಧ್ಯಕ್ಷೆ, ಭಾರತೀಯ ಮೂಲದ ಕಮಲಾ ಹ್ಯಾರೀಸ್ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಘೋಷಿಸಿದ್ದಾರೆ. ಇದು ಅಮೆರಿಕದಲ್ಲಿ ಭಾರೀ ಸಂಚಲನ ಮೂಡಿಸಿದ್ದಲ್ಲದೇ, ಭಾರತದಲ್ಲೂ ಸಂತಸ ಹೆಚ್ಚುವಂತೆ ಮಾಡಿದೆ.
ಇದಕ್ಕೆ ಪ್ರಮುಖ ಕಾರಣ, ಕಮಲಾ ಹ್ಯಾರಿಸ್ ಅವರು ಭಾರತದ ಮೂಲದವರು. ಅವರ ಸಂಬಂಧಿಕರು ತಮಿಳುನಾಡಿನಲ್ಲಿ ಇದ್ದಾರೆ. ಈ ನೆಲದ ಸಂಬಂಧ ಹೊಂದಿರುವ ಮಹಿಳೆಗೆ ವಿಶ್ವದ ದೊಡ್ಡಣ್ಣ ಎಂದು ಕರೆಯಿಸಿಕೊಳ್ಳುವ ರಾಷ್ಟ್ರದ ಅಧ್ಯಕ್ಷೀಯ ಉಮೇದುವಾರಿಕೆ ಸಿಕ್ಕಿದ್ದು ಹೆಮ್ಮೆಯ ಸಂಗತಿಯಾಗಿದೆ. ಹೀಗಾಗಿ ಅವರ ಸಂಬಂಧಿಕರು ಟೆಂಪಲ್ ರನ್ ನಡೆಸುತ್ತಿದ್ದಾರೆ.
ಬಂಧುಗಳಿಂದ ಗೆಲುವಿಗೆ ಪೂಜೆ:ಕಮಲಾ ಹ್ಯಾರಿಸ್ ಅವರ ಕುಟುಂಬದ ಬಂಧುಗಳು ಇನ್ನೂ ತಮಿಳುನಾಡಿನಲ್ಲಿ ಇದ್ದಾರೆ. ಕಮಲಾರ ತಾಯಿ ಶ್ಯಾಮಲಾ ಅವರ ಸಹೋದರಿ ಚೆನ್ನೈನಲ್ಲಿ ನೆಲೆಸಿದ್ದಾರೆ. ಇತರ ಕೆಲವು ಸಂಬಂಧಿಕರು ತುಲಸೇಂದ್ರಪುರಂ ಗ್ರಾಮದಲ್ಲಿದ್ದಾರೆ. ಕಮಲಾ ಅವರ ಪೂರ್ವಜರ ದೇವಾಲಯವಾದ ಧರ್ಮ ಶಾಸ್ತಾವು ಇಲ್ಲಿದೆ. ಕೆಲವು ವರ್ಷಗಳ ಹಿಂದೆ ದೇವಸ್ಥಾನಕ್ಕೆ ಕಮಲಾ ಅವರು ದೇಣಿಗೆ ಕೂಡ ನೀಡಿದ್ದರು. ಇದರ ವಿವರಗಳನ್ನು ದೇವಾಲಯದ ಶಾಸನದಲ್ಲಿ ಬರೆಸಲಾಗಿದೆ.
ಹೀಗಾಗಿ, ತುಳಸೇಂದ್ರಪುರಂ ಗ್ರಾಮದಲ್ಲಿನ ಕುಲದೈವಕ್ಕೆ ಅವರ ಸಂಬಂಧಿಕರು ಪೂಜೆ ಸಲ್ಲಿಸಿದ್ದಾರೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲಬೇಕು ಮತ್ತು ದೇಶದ ಆಡಳಿತದ ಚುಕ್ಕಾಣಿ ಹಿಡಿಯಬೇಕು. ಭಾರತದ ಅಭಿವೃದ್ಧಿಗೆ ಸಹಕರಿಸಬೇಕು ಎಂದೆಲ್ಲಾ ಪ್ರಾರ್ಥನೆ ಸಲ್ಲಿಸಿದ್ದಾರೆ.