ಕೋಲ್ಕತ್ತಾ: ಆರ್ ಜಿ ಕರ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಕಿರಿಯ ವೈದ್ಯೆ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಮತ್ತು ಏಕ ಆರೋಪಿಯಾಗಿರುವ ಸಂಜಯ್ ರಾಯ್ನನ್ನು ತಪ್ಪಿತಸ್ಥ ಎಂದು ಕೋಲ್ಕತ್ತಾ ಸೀಲ್ಡಾ ನ್ಯಾಯಾಲಯ ಆದೇಶ ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ಸೋಮವಾರ ಪ್ರಕಟಿಸಲಿದೆ.
ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 64, 66 ಮತ್ತು 103 (1) ಅಡಿಯಲ್ಲಿ ಅತ್ಯಾಚಾರ ಮತ್ತು ಕೊಲೆ ತಪ್ಪಿತಸ್ಥ ಎಂದು ನ್ಯಾಯಾಲಯ ಆದೇಶ ನೀಡಿದೆ.
ಕಳೆದ ಆಗಸ್ಟ್ನಲ್ಲಿ ನಡೆದ ಈ ಭೀಕರ ಘಟನೆ ವಿರುದ್ಧ ರಾಷ್ಟ್ರಾದ್ಯಂತ ಪ್ರತಿಭಟನೆ ವ್ಯಕ್ತವಾಗಿತ್ತು. ಈ ಪ್ರಕರಣದ ಆದೇಶವನ್ನು ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಮೂರ್ತಿಗಳ ಅನಿರ್ಬನ್ ದಾಸ್ ನೀಡಿದರು.
ಕಳೆದ ಆಗಸ್ಟ್ 9ರಂದು ರಾಜ್ಯ ಸರ್ಕಾರಿ ಆಸ್ಪತ್ರೆಯ ಸ್ನಾತಕೋತ್ತರ ಟ್ರೈನಿ ಮೇಲೆ ನಡೆದ ಈ ಅಪರಾಧ ಪ್ರಕರಣದಲ್ಲಿ ಆರೋಪಿಯನ್ನು 24 ಗಂಟೆಯ ಒಳಗೆ ಆಗಸ್ಟ್ 10ರಂದು ಪೊಲೀಸರು ಬಂಧಿಸಿದ್ದರು.
ಈ ಪ್ರಕರಣದ ವಿಚಾರಣೆಯು ನವೆಂಬರ್ 12ರಿಂದ ಪ್ರಾರಂಭವಾಗಿದ್ದು, 50 ಸಾಕ್ಷ್ಯಗಳನ್ನು ವಿಚಾರಣೆ ನಡೆಸಲಾಗಿದೆ. ಜನವರಿ 9ರಂದು ರಾಯ್ ವಿಚಾರಣೆ ಮುಕ್ತಾಯಗೊಳಿಸಲಾಗಿದೆ. ಈ ಪ್ರಕರಣದಲ್ಲಿ ಮೃತ ವೈದ್ಯರ ತಂದೆ, ಸಿಬಿಐ ತನಿಖಾಧಿಕಾರಿ, ಕೋಲ್ಕತ್ತಾ ಪೊಲೀಸ್ ತನಿಖಾಧಿಕಾರಿ, ವಿಧಿವಿಜ್ಞಾನ ತಜ್ಞರು ಮತ್ತು ಮೃತರ ಕೆಲವು ಸಹಪಾಠಿಗಳು ಪ್ರಕರಣದಲ್ಲಿ ಸಾಕ್ಷ್ಯ ನೀಡಿದ್ದಾರೆ.
ಇದನ್ನೂ ಓದಿ: ಆರ್ಜಿ ಕರ್ ಅತ್ಯಾಚಾರ, ಕೊಲೆ ಪ್ರಕರಣ: ಕೆಲವೇ ಕ್ಷಣಗಳಲ್ಲಿ ತೀರ್ಪು ಪ್ರಕಟ