ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬೆನ್ನುಬಿದ್ದಿರುವ ವಿಶೇಷ ಪೊಲೀಸ್ ಪಡೆ (ಎಸ್‌ಟಿಎಫ್) ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಅಭಿಷೇಕ್ ಶುಕ್ಲಾ, ಶಿವಂ ಗಿರಿ ಮತ್ತು ರೋಹಿತ್ ಕುಮಾರ್ ಎಂಬುವವರೇ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಉತ್ತರ ಪ್ರದೇಶ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯು ಫೆಬ್ರವರಿ 17 ಮತ್ತು 18ರಂದು ನಿಗದಿ ಪಡಿಸಲಾಗಿತ್ತು. ಆದರೆ, ಪ್ರಶ್ನೆಪತ್ರಿಕೆ ಸೋರಿಕೆಯ ಸುದ್ದಿ ಹರಡುತ್ತಿದ್ದಂತೆ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಎಸ್‌ಟಿಎಫ್ ತಂಡ ವಿವಿಧೆಡೆ ದಾಳಿ ನಡೆಸಿ, ಪ್ರಕರಣದಲ್ಲಿ ಭಾಗಿಯಾಗಿದ್ದ ಗ್ಯಾಂಗ್ ಅನ್ನು ಭೇದಿಸಿದೆ.
ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ವಾರಾಣಸಿ, ಮೀರತ್, ಆಗ್ರಾ ಸೇರಿದಂತೆ ಹಲವು ಜಿಲ್ಲೆಗಳಲ್ಲಿ 12 ಪ್ರಕರಣಗಳು ದಾಖಲಾಗಿವೆ. ಈ ಸಂಬಂಧ ಇದುವರೆಗೆ 54 ಜನರನ್ನು ಬಂಧಿಸಲಾಗಿದೆ. ಇವರ ಬಂಧನದ ನಂತರ ಒಂದೊಂದಾಗಿ ಲಿಂಕ್‌ಗಳು ಬಯಲಿಗೆ ಬಂದಿವೆ. ಇದೀಗ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸುವ ಮೂಲಕ ಎಸ್‌ಟಿಎಫ್ ಪ್ರಶ್ನೆಪತ್ರಿಕೆ ಸೋರಿಕೆ ಸಂಪೂರ್ಣ ಷಡ್ಯಂತ್ರವನ್ನು ಬಹಿರಂಗಪಡಿಸಿದೆ. ಈ ಹಿಂದೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳ ಪೇಪರ್ ಸೋರಿಕೆ ಮಾಡಿರುವ ಸಾರಿಗೆ ಸಂಸ್ಥೆ ನೌಕರರು, ವೈದ್ಯರು ಹಾಗೂ ಕೆಲ ಆರೋಪಿಗಳೇ ಪೊಲೀಸ್ ನೇಮಕಾತಿ ಪರೀಕ್ಷೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಡಿಜಿಪಿ ಪ್ರಶಾಂತ್ ಕುಮಾರ್ ಹೇಳಿದ್ದಾರೆ.
ಸದ್ಯ ಬಂಧಿತ ಆರೋಪಿ ಅಭಿಷೇಕ್ ಶುಕ್ಲಾ ಅಹಮದಾಬಾದ್ ಮೂಲದ ಸಾರಿಗೆ ಸಂಸ್ಥೆ ಟಿಸಿಐ ಎಕ್ಸ್‌ಪ್ರೆಸ್‌ನ ತರಬೇತಿ ಕಾರ್ಯನಿರ್ವಾಹಕನಾಗಿದ್ದಾನೆ. ಈತನ ವಿಚಾರಣೆಯ ಸಮಯದಲ್ಲಿ ಹಲವು ಅಂಶಗಳು ಬಯಲಿಗೆ ಬಂದಿವೆ. 2021ರಲ್ಲಿ ಪ್ರಯಾಗರಾಜ್ ಮೂಲದ ಅಂಕಿತ್ ಮಿಶ್ರಾನನ್ನು ಈ ಅಭಿಷೇಕ್ ಶುಕ್ಲಾ ಭೇಟಿಯಾಗಿದ್ದ. ನಂತರ ಶಿವಂ ಗಿರಿ, ರೋಹಿತ್ ಪಾಂಡೆ, ರವಿ ಅತ್ರಿಗೆ ಎಂಬುವರ ಸಂಪರ್ಕ ಬಂದಿದ್ದರು ಎಂದು ಡಿಜಿಪಿ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿನ ಅನೇಕ ನೇಮಕಾತಿಗಳ ಪರೀಕ್ಷೆಯ ಪತ್ರಿಕೆಗಳನ್ನು ಸಾರಿಗೆ ಕಂಪನಿಯಾದ ಟಿಸಿಐ ಎಕ್ಸ್‌ಪ್ರೆಸ್‌ನಲ್ಲಿ ಮಾತ್ರ ಮುದ್ರಿಸಲಾಗುತ್ತದೆ ಎಂದು ರವಿ ಅತ್ರಿಗೆ ತಿಳಿದಿತ್ತು. ಯಾವುದೇ ಪ್ರಶ್ನೆಪತ್ರಿಕೆ ಮುದ್ರಣಕ್ಕೆ ಬಂದರೂ ರೋಹಿತ್, ಶಿವಂ ಮತ್ತು ಅಭಿಷೇಕ್ಗೆ ರವಿ ತಿಳಿಸುತ್ತಿದ್ದ. ಇದಕ್ಕಾಗಿ 15 ರಿಂದ 20 ಲಕ್ಷ ರೂಪಾಯಿ ಪಡೆಯಲಾಗುತ್ತಿತ್ತು ಎಂದು ತನಿಖೆಯಲ್ಲಿ ಗೊತ್ತಾಗಿದೆ ಎಂದು ವಿವರಿಸಿದರು.
ಅದರಂತೆಯೇ, ಪೊಲೀಸ್ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳ ಫೋಟೋ ತೆಗೆದು ಸೋರಿಕೆ ಮಾಡಿದ್ದಾರೆ. ಆರಂಭವಾಗುವ ಮುನ್ನವೇ ಫೆಬ್ರವರಿ 8 ರಂದು ಕೋಡ್ ನಂಬರ್ ಒನ್ ಪೇಪರ್ ಬಂದಿರುವ ಬಗ್ಗೆ ಮಾಹಿತಿ ಪಡೆದು ಆರೋಪಿಗಳೆಲ್ಲರೂ ಮತ್ತೆ ಅಹಮದಾಬಾದ್ ತಲುಪಿ ಅದರ ಫೋಟೋಗಳನ್ನು ತೆಗೆದುಕೊಂಡು ವಾಪಸ್ ಬಂದಿದ್ದಾರೆ. ನಂತರ ಪ್ರಶ್ನೆಪತ್ರಿಕೆಗಳನ್ನು ತಮ್ಮ ಸಹಚರೊಂದಿಗೆ ಹಂಚಿಕೊಂಡಿದ್ದಾರೆ. ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ಕೈಯಿಂದ ಬರೆದಿದ್ದರು. ಅಷ್ಟೇ ಅಲ್ಲ, ಈ ಪ್ರಶ್ನೆಪತ್ರಿಕೆಗಳ ಉತ್ತರಗಳನ್ನು ರೆಸಾರ್ಟ್‌ವೊಂದರಲ್ಲಿ ಕುಳಿತು ಅಭ್ಯರ್ಥಿಗಳಿಗೆ ಕಂಠಪಾಠ ಮಾಡಿಸಿದ್ದರು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಬಿಹಾರ ಶಿಕ್ಷಕರ ನೇಮಕ ಪರೀಕ್ಷೆ: ಜಾರ್ಖಂಡ್‌ನಲ್ಲಿ ಪ್ರಶ್ನೆ ಪ್ರತಿಕೆ ಸೋರಿಕೆ ಶಂಕೆ, 200 ಅಭ್ಯರ್ಥಿಗಳ ವಿಚಾರಣೆ