ಶ್ರೀನಗರ: ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್ಎ) ಅಡಿಯಲ್ಲಿ ಪತ್ರಕರ್ತ ಮಜೀದ್ ಹೈದರಿ ಅವರ ಬಂಧನ ಆದೇಶವನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ. ನ್ಯಾಯಮೂರ್ತಿ ವಿ.ಕೆ.ಚಟರ್ಜಿ ಅವರು ಪಿಎಸ್ಎ ಅಡಿಯಲ್ಲಿ ಹೈದರಿ ಬಂಧನದ ಆದೇಶವನ್ನು ರದ್ದುಗೊಳಿಸಿದ್ದಾರೆ ಎಂದು ಅರ್ಜಿದಾರರ ವಕೀಲರು ಸುದ್ದಿಗಾರರಿಗೆ ತಿಳಿಸಿದರು.
ಸುಲಿಗೆ ಮತ್ತು ಮಾನಹಾನಿ ಆರೋಪದ ಮೇಲೆ ಮಜೀದ್ ಹೈದರಿಯನ್ನು ಬಂಧಿಸಿ ಪಿಎಸ್ಎ ಅಡಿಯಲ್ಲಿ ಸೆಪ್ಟೆಂಬರ್ 2023ರಲ್ಲಿ ಪ್ರಕರಣ ದಾಖಲಿಸಲಾಗಿತ್ತು. ನಂತರ ಅವರನ್ನು ಜಮ್ಮು ಜಿಲ್ಲೆಯ ಕೋಟ್ ಬಲ್ವಾಲ್ ಜೈಲಿನಲ್ಲಿ ಇರಿಸಲಾಗಿತ್ತು. ಈ ಹಿಂದಿನ ವಿಚಾರಣೆಯಲ್ಲಿ ಎರಡೂ ಕಡೆಯ ತೀವ್ರ ವಾದ ಆಲಿಸಿದ ನಂತರ ನ್ಯಾಯಾಲಯವು ಮಜೀದ್ ಬಂಧನದ ತೀರ್ಪನ್ನು ಕಾಯ್ದಿರಿಸಿತ್ತು ಮತ್ತು ಇಂದು ತೀರ್ಪನ್ನು ಪ್ರಕಟಿಸಿತು.
ಮತ್ತೊಂದು ಪ್ರಕರಣದಲ್ಲಿ, ಪಿಎಸ್ಎ ಅಡಿಯಲ್ಲಿ ತನ್ನ ಬಂಧನ ಆದೇಶವನ್ನು ಪ್ರಶ್ನಿಸಿ ಹಿರಿಯ ವಕೀಲ ಮಿಯಾನ್ ಖಯೂಮ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ವಕೀಲ ಬಾಬರ್ ಖಾದ್ರಿ ಹತ್ಯೆ ಪ್ರಕರಣದಲ್ಲಿ ಮಿಯಾನ್ ಖಯೂಮ್ ಅವರನ್ನು 2024ರ ಜೂನ್ 25ರಂದು ಬಂಧಿಸಲಾಗಿತ್ತು.
ಖಾದ್ರಿ ಅವರನ್ನು 2020ರಲ್ಲಿ ಶ್ರೀನಗರ ನಗರದ ಹವಾಲ್ ಪ್ರದೇಶದ ಅವರ ಮನೆಯಲ್ಲಿ ಬಂದೂಕುಧಾರಿಗಳು ಹತ್ಯೆ ಮಾಡಿದ್ದರು. ಹತ್ಯೆಗೂ ಮುನ್ನ ಮಿಯಾನ್ ಖಯೂಮ್ ತನ್ನನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂದು ಖಾದ್ರಿ ಆರೋಪಿಸಿದ್ದರು. ಬಾಬರ್ ಖಾದ್ರಿ ಹತ್ಯೆ ಪ್ರಕರಣದಲ್ಲಿ ಮಿಯಾನ್ ಖಯೂಮ್ ನನ್ನು ಬಂಧಿಸಲು ಸಾಕಷ್ಟು ಪುರಾವೆಗಳಿವೆ ಎಂದು ನಂತರ ರಚಿಸಲಾದ ವಿಶೇಷ ತನಿಖಾ ತಂಡ (ಎಸ್ ಐಟಿ) ಹೇಳಿದೆ.
ಡಿಸೆಂಬರ್ 19, 2024ರಂದು ಪೊಲೀಸರ ವಿಶೇಷ ತನಿಖಾ ಸಂಸ್ಥೆ (ಎಸ್ಐಎ) ಹೈಕೋರ್ಟ್ ಬಾರ್ ಅಸೋಸಿಯೇಷನ್-ಕಾಶ್ಮೀರ (ಎಚ್ ಸಿಬಿಎ-ಕೆ) ಮಾಜಿ ಅಧ್ಯಕ್ಷ 80 ವರ್ಷದ ಮಿಯಾನ್ ಅಬ್ದುಲ್ ಖಯೂಮ್ ವಿರುದ್ಧ ಪೂರಕ ಚಾರ್ಜ್ ಶೀಟ್ ಸಲ್ಲಿಸಿತ್ತು ಮತ್ತು 2020 ರಲ್ಲಿ ನಡೆದ ವಕೀಲ ಬಾಬರ್ ಖಾದ್ರಿ ಅವರ ಹತ್ಯೆಯಲ್ಲಿ ಅವರ ಪಾತ್ರದ ಬಗ್ಗೆ ದಾಖಲೆ ಮತ್ತು ತಾಂತ್ರಿಕ ಪುರಾವೆಗಳಿರುವುದಾಗಿ ಹೇಳಿತ್ತು.
ಇದನ್ನೂ ಓದಿ: 'ನಾನು ಬಹುಧರ್ಮಗಳನ್ನು ನಂಬುವ ವ್ಯಕ್ತಿ': ಸೇನಾ ಮುಖ್ಯಸ್ಥ ಜನರಲ್ ದ್ವಿವೇದಿ - GENERAL DWIVEDI