ಹರಿದ್ವಾರ: ಇಲ್ಲಿನ ಮೋತಿಚುರ್ ರೈಲ್ವೆ ನಿಲ್ದಾಣ ಸಮೀಪದ ರೈಲ್ವೆ ಹಳಿ ಮೇಲೆ ಡಿಟೋನೇಟರ್ ಇಟ್ಟ ವ್ಯಕ್ತಿಯನ್ನು ಹರಿದ್ವಾರ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಅಶೋಕ್ ಎಂದು ಗುರುತಿಸಲಾಗಿದೆ. ಈತ ಉತ್ತರ ಪ್ರದೇಶದ ರಾಮ್ಪುರ ಜಿಲ್ಲೆಯ ನಿವಾಸಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹಳಿಗಳ ಮೇಲೆ ಡಿಟೋನೇಟರ್ ಕಂಡುಬಂದಿದ್ದು, ಕೂಡಲೇ ಮೊರದಾಬಾದ್ ರೈಲ್ವೆ ವಿಭಾಗ ಕಂಟ್ರೋಲ್ ರೂಂಗೆ ಮಾಹಿತಿ ರವಾನೆಯಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಹರಿದ್ವಾರದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಈ ವೇಳೆ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ವ್ಯಕ್ತಿಯೊಬ್ಬ ರೈಲ್ವೆ ಹಳಿಗಳ ಮೇಲೆ ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಗೊತ್ತಾಗಿದೆ.