ನವದೆಹಲಿ:ಛತ್ತೀಸ್ಗಢದಲ್ಲಿ ಭಾನುವಾರ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ 31 ನಕ್ಸಲರು ಹತ್ಯೆಯಾಗಿದ್ದರು. ನಕ್ಸಲ್‌ಮುಕ್ತ ರಾಷ್ಟ್ರಕ್ಕಾಗಿ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿರುವ ನಡುವೆ ಭಾರಿ ಯಶಸ್ಸು ಸಿಕ್ಕಿದೆ. ಭದ್ರತಾ ಪಡೆಗಳ ಈ ಕಾರ್ಯಾಚರಣೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ಲಾಘಿಸಿದ್ದಾರೆ.
ನಕ್ಸಲ್‌ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಇಲ್ಲಿನ ವಿಜ್ಞಾನ ಭವನದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜನವರಿಯಿಂದ 194 ನಕ್ಸಲೀಯರನ್ನು ಹತ್ಯೆ ಮಾಡಲಾಗಿದೆ. 801 ಜನರ ಬಂಧನ, 742 ಮಂದಿ ಶರಣಾಗತರಾಗಿದ್ದಾರೆ. ನಕ್ಸಲಿಸಂ ವಿರುದ್ಧದ ಹೋರಾಟದಲ್ಲಿ ಛತ್ತೀಸ್‌ಗಢ ಸರ್ಕಾರ ದೊಡ್ಡ ಯಶಸ್ಸು ಸಾಧಿಸಿದೆ ಎಂದರು.
ಈಶಾನ್ಯ ರಾಜ್ಯಗಳು ಮತ್ತು ಜಮ್ಮು-ಕಾಶ್ಮೀರದಲ್ಲಿ ಸುಮಾರು 13 ಸಾವಿರ ಮಂದಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದಾರೆ. ನಕ್ಸಲ್ವಾದದಲ್ಲಿ ತೊಡಗಿಕೊಂಡಿರುವ ಯುವಕರು ಇದರಿಂದ ಹೊರಬಂದು ಮುಖ್ಯವಾಹಿನಿಗೆ ಸೇರುವಂತೆ ಅಮಿತ್ ಶಾ ಮನವಿ ಮಾಡಿದರು.
ಹಿಂಸಾಚಾರ ಗಮನಾರ್ಹ ಇಳಿಕೆ:ಭಾರತದಾದ್ಯಂತ ಹಿಂಸಾಚಾರ ಮತ್ತು ಭಯೋತ್ಪಾದನೆ ಸಂಬಂಧಿತ ಘಟನೆಗಳು ಗಮನಾರ್ಹ ಇಳಿಕೆ ಕಂಡಿವೆ. 10 ವರ್ಷಗಳ ಹಿಂದೆ 16,463 ಹಿಂಸಾತ್ಮಕ ಘಟನೆಗಳು ದಾಖಲಾಗುತ್ತಿದ್ದವು. ಇದೀಗ ಆ ಸಂಖ್ಯೆ 7,700ಕ್ಕೆ ಇಳಿದಿದೆ. ಮುಂದಿನ ವರ್ಷದ ವೇಳೆಗೆ ಇದು ಮತ್ತಷ್ಟು ಕುಸಿಯಲಿದೆ. ನಾಗರಿಕರು ಮತ್ತು ಭದ್ರತಾ ಪಡೆಗಳ ಸಾವುಗಳು ಶೇಕಡಾ 70 ರಷ್ಟು ಕಡಿಮೆಯಾಗಿದೆ. ಹಿಂಸಾಚಾರ ವರದಿಯಾಗುವ ಜಿಲ್ಲೆಗಳ ಸಂಖ್ಯೆ 96ರಿಂದ 42ಕ್ಕೆ ಇಳಿದಿದೆ. ಹಿಂಸಾಚಾರ ಕೇಸ್ ದಾಖಲಾಗುವ ಪೊಲೀಸ್ ಠಾಣೆಗಳ ಸಂಖ್ಯೆಯೂ 465 ರಿಂದ 171ಕ್ಕೆ ಇಳಿದಿದೆ. ಇದರಲ್ಲಿ 50 ಠಾಣೆಗಳು ಹೊಸದಾಗಿ ರಚಿತವಾಗಿವೆ. ಅಂದರೆ 120 ಪೊಲೀಸ್ ಠಾಣೆಗಳು ಮಾತ್ರ ಹಿಂಸಾಚಾರ ಕೇಸ್ ವರದಿ ಮಾಡುತ್ತಿವೆ ಎಂದು ಅಂಕಿಅಂಶ ನೀಡಿದರು.