ನವದೆಹಲಿ:ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆಯ ಹೆಗ್ಗುರುತೆಂದೇ ಬಿಂಬಿತವಾಗಿರುವ ಒಂದು ದೇಶ, ಒಂದು ಚುನಾವಣೆ, ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ (ತಿದ್ದುಪಡಿ) ಮಸೂದೆ- 2024 ವಿಧೇಯಕವನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಗಳವಾರ ಮಂಡಿಸಿತು. ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಎರಡು ವಿಧೇಯಕಗಳನ್ನು ಸಂಸತ್ತಿನ ಮುಂದಿಟ್ಟರು.
ಎರಡೂ ಮಸೂದೆಗಳು ಕೇಂದ್ರ ಸಚಿವ ಸಂಪುಟದಿಂದ ಡಿಸೆಂಬರ್ 9ರಂದು ಅನುಮೋದನೆ ಪಡೆದುಕೊಂಡಿದ್ದವು. ಸಂವಿಧಾನದ 129ನೇ ತಿದ್ದುಪಡಿ ಮೂಲಕ ಜಾರಿ ಮಾಡಬೇಕಿರುವ ಮಹತ್ವಾಕಾಂಕ್ಷಿ ಒಂದು ದೇಶ, ಒಂದು ಚುನಾವಣೆ ವಿಧೇಯಕವು ದೇಶದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡುತ್ತದೆ.
ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ, ಪುದುಚೇರಿ ಮತ್ತು ದೆಹಲಿ ವಿಧಾನಸಭೆಗಳಿಗೆ ಲೋಕಸಭೆ ಜೊತೆಗೆ ಚುನಾವಣೆ ಮತ್ತು ರಾಜ್ಯ ಸ್ಥಾನಮಾನ ನೀಡುವ ಅಂಶವನ್ನು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ (ತಿದ್ದುಪಡಿ) ಮಸೂದೆ ಹೊಂದಿದೆ. ಎರಡೂ ಮಸೂದೆಗಳು ಸದ್ಯ ಸಂಸತ್ತಿನಲ್ಲಿ ಮಂಡನೆಯಾಗಿದ್ದು ಚರ್ಚೆ ದಾರಿ ಮಾಡಿಕೊಟ್ಟಿದೆ.
ವಿಪಕ್ಷಗಳಿಂದ ತೀವ್ರ ವಿರೋಧ:ಪ್ರಸ್ತಾವಿತ ಮಸೂದೆಗಳನ್ನು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದವು. ವಿಧೇಯಕಗಳ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಕಾಂಗ್ರೆಸ್‌ನ ಹಿರಿಯ ಸಂಸದ ಮನೀಶ್ ತಿವಾರಿ, ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೂಲಭೂತ ರಚನೆಗಳಿಗೆ ಈ ವಿಧೇಯಕ ವಿರುದ್ಧವಾಗಿದೆ ಎಂದರು.