ನವದೆಹಲಿ:ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಕೊನೆಯ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಇದರಲ್ಲಿ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಯಲಿದ್ದು ಮತ್ತು ಪ್ರಸ್ತುತ ಮಂತ್ರಿ ಮಂಡಲವನ್ನು ವಿಸರ್ಜಿಸುವ ಬಗ್ಗೆ ಶಿಫಾರಸು ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
ನಿನ್ನೆ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) 3ನೇ ಬಾರಿಗೆ ಬಹುಮತ ಪಡೆದಿದೆ. ಎನ್‌ಡಿಎ ಮೈತ್ರಿಕೂಟ ಒಟ್ಟು 292 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಆದರೆ ಮೋದಿ ಸರ್ಕಾರ ಈ ಬಾರಿ 400ಕ್ಕೂ ಹೆಚ್ಚು ಸೀಟುಗಳನ್ನು ಪಡೆಯಬಹುದೆಂಬ ನಿರೀಕ್ಷೆ ಹೊಂದಿತ್ತು. ಇದು ಸಫಲವಾಗುವುದಿರಲಿ, ಏಕಾಂಗಿಯಾಗಿ 272ರ ಅಂಕಿಯನ್ನು ಕೂಡಾ ದಾಟಲು ಸಾಧ್ಯವಾಗಿಲ್ಲ. ಅಲ್ಲದೇ ಬಿಜೆಪಿಯೂ 240 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದರಿಂದ ಸ್ವತಂತ್ರ ಸರ್ಕಾರ ರಚನೆ ಮಾಡುವ ಕನಸು ಭಗ್ನಗೊಂಡಿದೆ. ಮತ್ತೊಂದೆಡೆ ಇಂಡಿಯಾ ಕೂಟವು ಪ್ರಬಲ ಪೈಪೋಟಿ ನೀಡಿ 234 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಇದೀಗ ಲೋಕಸಭೆ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಕೇಂದ್ರದಲ್ಲಿ ಸರ್ಕಾರ ರಚನೆಗೆ ಕಸರತ್ತು ಆರಂಭವಾಗಿದೆ. ಈ ಸಂಬಂಧ ಇಂದು ಬೆಳಗ್ಗೆ 11.30 ನಿಮಿಷಕ್ಕೆ ಮೋದಿ ನೇತೃತ್ವದಲ್ಲಿ ಎನ್‌ಡಿಎ ಮಿತ್ರಪಕ್ಷಗಳ ಸಭೆ ಕರೆಯಲಾಗಿದ್ದು, ಮುಂದಿನ ಕಾರ್ಯತಂತ್ರ ಏನು ಎಂಬುದರ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ. ಈ ಸಭೆಯಲ್ಲಿ ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಕೂಡ ಭಾಗಿಯಾಗಲಿದ್ದಾರೆ. ಮತ್ತೊಂದೆಡೆ ಇಂದು ಸಂಜೆ ಇಂಡಿಯಾ ಮೈತ್ರಿ ಕೂಟದ ಸಭೆ ಕರೆಯಲಾಗಿದೆ. ಸರ್ಕಾರ ರಚಿಸುವ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇಂದು ನಡೆಯಲಿರುವ ಎನ್‌ಡಿಎ ಸಭೆಗೆ ಹಾಜರಾಗುವಂತೆ ಗೃಹ ಸಚಿವ ಅಮಿತ್ ಶಾ ಅವರು ಎಲ್ಲ ಮಿತ್ರಪಕ್ಷಗಳ ನಾಯಕರನ್ನು ಕರೆದಿದ್ದಾರೆ. ಇದಕ್ಕೂ ಮುನ್ನ ಮಂಗಳವಾರ ಸಂಜೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ನಿವಾಸದಲ್ಲಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಚುನಾವಣಾ ಫಲಿತಾಂಶ ಮತ್ತು ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಭಾಗಿಯಾಗಿದ್ದರು.
ಇದನ್ನೂ ಓದಿ:ಸಂಪೂರ್ಣವಾಗಿ ಮುಗಿದ ಮತ ಎಣಿಕೆ: ದೆಹಲಿಯಲ್ಲಿ 3ನೇ ಬಾರಿಗೆ ಕ್ಲೀನ್ ಸ್ವೀಪ್ ಮಾಡಿ ಇತಿಹಾಸ ಬರೆದ ಬಿಜೆಪಿ - lok sabaha elections 2024