ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು ಇಂದು ಸಂಸತ್ತಿನ ಉಭಯ ಸದನಗಳಲ್ಲಿ ಆರ್ಥಿಕ ಸಮೀಕ್ಷೆ ವರದಿಯನ್ನು ಮಂಡಿಸಿದ್ದಾರೆ. 2024-25ರ ಆರ್ಥಿಕ ಸಮೀಕ್ಷೆಯ ಪ್ರಕಾರ, 2025-26 ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ 6.3 ರಿಂದ 6.8 ಶೇಕಡಾ ನಡುವೆ ಇರಬಹುದು ಎಂದು ಅಂದಾಜು ಮಾಡಲಾಗಿದೆ.
ಮುಖ್ಯ ಆರ್ಥಿಕ ಸಲಹೆಗಾರ ವಿ.ಅನಂತ ನಾಗೇಶ್ವರನ್ ಹಾಗೂ ಅವರ ತಂಡ ರಚಿಸಿರುವ 2024-25ರ ಆರ್ಥಿಕ ಸಮೀಕ್ಷೆ ವರದಿಯನ್ನು ಇಂದು ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಮಂಡಿಸಿದರು. ನಿಧಾನಗತಿಯ ಜಿಡಿಪಿ ಬೆಳವಣಿಗೆ, ದುರ್ಬಲ ಉತ್ಪಾದನೆ ಮತ್ತು ಖಾಸಗಿ ಹೂಡಿಕೆ, AI ಮತ್ತು ಆಟೋಮೇಶನ್ ಏರಿಕೆಯ ನಡುವೆ ಉದ್ಯೋಗ ಸೃಷ್ಟಿಯಲ್ಲಿ ತೊಂದರೆ ಇತ್ಯಾದಿಗಳಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ದರವು ನಾಲ್ಕು ವರ್ಷಗಳ ಕನಿಷ್ಠ ಮಟ್ಟವಾದ ಶೇ. 6.4ಕ್ಕೆ ಇಳಿಯುವ ಸಾಧ್ಯತೆ ಎಂದು ಸಮೀಕ್ಷಾ ವರದಿ ಹೇಳಿದೆ. ಕಳೆದ ವರ್ಷದ ಆರ್ಥಿಕ ಸಮೀಕ್ಷೆಯಲ್ಲಿ ಹೇಳಲಾಗಿದ್ದ ಶೇ. 6.5 - 7 ಮತ್ತು ರಿಸರ್ವ್ ಬ್ಯಾಂಕ್ ಅಂದಾಜಿಸಿದ್ದ ಶೇ.6.6 ಬೆಳವಣಿಗೆಗಿಂತ ಇದು ಕಡಿಮೆಯಾಗಿದೆ.
ಬಲವಾದ ಮೂಲಭೂತ ಅಂಶಗಳು, ಹಣಕಾಸು ಬಲವರ್ಧನೆ, ಸ್ಥಿರವಾದ ಖಾಸಗಿ ಬಳಕೆಯ ಆಧಾರದ ಮೇಲೆ ಭಾರತದ ಜಿಡಿಪಿ ಬೆಳವಣಿಗೆ ಅಂದಾಜಿಸಲಾಗಿದೆ. ಇವೆಲ್ಲದರಿಂದಾಗಿ ದೇಶೀಯ ಆರ್ಥಿಕತೆಯ ಮೂಲಭೂತ ಅಂಶಗಳು ದೃಢವಾಗಿವೆ. ಇವೆಲ್ಲವುಗಳ ಸಮತೋಲನದ ಮೇಲೆ 2026ರ ಹಣಕಾಸು ವರ್ಷದಲ್ಲಿ ಆರ್ಥಿಕ ಬೆಳವಣಿಗೆ ದರ ಶೇ.6.3 ರಿಂದ 6.8ರ ನಡುವೆ ಇರಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.
ಜಾಗತಿಕ ಅಡೆತಡೆಗಳನ್ನು ನಿವಾರಿಸಲು, ಕಾರ್ಯತಂತ್ರ ಹಾಗೂ ವಿವೇಕಯುತ ನೀತಿ ನಿರ್ವಹಣೆ ಮತ್ತು ದೇಶೀಯ ಮೂಲ ಅಂಶಗಳನ್ನು ಬಲಪಡಿಸುವ ಅಗತ್ಯವಿದೆ. 2024-25ರ ಬಜೆಟ್ ನಿರಂತರ ಬೆಳವಣಿಗೆಯ ಉತ್ತೇಜನಕ್ಕಾಗಿ ಬಹು - ವಲಯ ನೀತಿ ಕಾರ್ಯಸೂಚಿ ರೂಪಿಸಿದೆ. ಸಾರ್ವಜನಿಕ ಬಂಡವಾಳ ಹೂಡಿಕೆಯಲ್ಲಿನ ಹೆಚ್ಚಳ ಮತ್ತು ವ್ಯವಹಾರ ನಿರೀಕ್ಷೆಗಳಲ್ಲಿ ಸುಧಾರಣೆಯಿಂದಾಗಿ ಹೂಡಿಕೆ ಚಟುವಟಿಕೆಗಳು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಸಮೀಕ್ಷೆ ವರದಿ ಹೇಳಿದೆ.
ಹಣದುಬ್ಬರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಸರಕು ಬೆಲೆಗಳಿಂದ ಉಂಟಾಗುವ ಅಪಾಯ 2026ರ ಹಣಕಾಸು ವರ್ಷದಲ್ಲಿ ಸೀಮಿತವಾಗಿರಲಿದೆ. ಆದರೆ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಇನ್ನೂ ಒಂದು ಸಮಸ್ಯೆಯಾಗಿ ಮುಂದುವರಿಯಲಿದೆ ಎಂದು ಅದು ಹೇಳಿದೆ. ಮುಂಗಾರು ಆಗಮನದಲ್ಲಿ ತರಕಾರಿ ಬೆಲೆಗಳ ಕಾಲೋಚಿತ ಇಳಿಕೆಯಿಂದಾಗಿ 2025ರ ನಾಲ್ಕನೇ ತ್ರೈಮಾಸಿಕದಲ್ಲಿ ಆಹಾರ ಹಣದುಬ್ಬರ ಕಡಿಮೆಯಾಗುವ ಸಾಧ್ಯತೆಯಿದೆ.
ಕೇಂದ್ರ ಬಜೆಟ್ಗಿಂತ ಒಂದು ದಿನ ಮುಂಚಿತವಾಗಿ ಪ್ರತಿ ವರ್ಷ ಮಂಡಿಸಲಾಗುವ ಆರ್ಥಿಕ ಸಮೀಕ್ಷೆಯು, ಪ್ರಸಕ್ತ ಹಣಕಾಸು ವರ್ಷದ ಸ್ಥೂಲ ಆರ್ಥಿಕ ಕಾರ್ಯಕ್ಷಮತೆ ಮತ್ತು ಮುಂದಿನ ಹಣಕಾಸು ವರ್ಷ ಹೇಗೆ ಹೊರಹೊಮ್ಮುವ ಸಾಧ್ಯತೆಯಿದೆ ಎಂಬುದರ ಕುರಿತು ಒಂದು ವಿವರವಾದ ಮಾಹಿತಿಯನ್ನು ನೀಡುತ್ತದೆ.
ಇದನ್ನೂ ಓದಿ: ಭಾರತ ಶೀಘ್ರದಲ್ಲೇ ಜಗತ್ತಿನ 3ನೇ ಅತಿದೊಡ್ಡ ಆರ್ಥಿಕತೆ: ರಾಷ್ಟ್ರಪತಿ ಮುರ್ಮು