ಬೆಂಗಳೂರು: ಅತ್ಯಾಚಾರದಿಂದ ಗರ್ಭಿಣಿಯಾಗಿದ್ದ 16 ವರ್ಷದ ಅಪ್ರಾಪ್ತೆಯ 27 ವಾರಗಳ ಭ್ರೂಣದ ವೈದ್ಯಕೀಯ ಗರ್ಭಪಾತಕ್ಕೆ ರಾಜ್ಯ ಹೈಕೋರ್ಟ್ ಅನುಮತಿಸಿದೆ.
ಅತ್ಯಾಚಾರಕ್ಕೊಳಗಾಗಿದ್ದ ಅಪ್ರಾಪ್ತ ಸಂತ್ರಸ್ತೆ ಪರವಾಗಿ ಅವರ ತಾಯಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ನ್ಯಾಯಪೀಠ ವಾಣಿವಿಲಾಸ ಆಸ್ಪತ್ರೆಯ ವೈದ್ಯಕೀಯ ಮಂಡಳಿಯ ಅಭಿಪ್ರಾಯ ಪಡೆದ ನಂತರ ಈ ಆನುಮತಿ ನೀಡಿದೆ. ಅಪ್ರಾಪ್ತೆಗೆ ವೈದ್ಯಕೀಯ ಗರ್ಭಪಾತ ನಿಯಮಗಳು 1971 ಆಸ್ಪತ್ರೆಯ ವೆಚ್ಚದಲ್ಲಿ ಗರ್ಭಪಾತ ಪ್ರಕ್ರಿಯೆ ಸರ್ಕಾರಿ ವೆಚ್ಚದಲ್ಲಿ ನಡೆಸಬೇಕು. ಅರ್ಜಿದಾರ ಅಪ್ರಾಪ್ತೆಯ ಜೀವಕ್ಕೆ ಹಾನಿಯಾಗುವಂತಿದ್ದರೆ ಅಂತಹ ಕಾರ್ಯವಿಧಾನವನ್ನು ಮುಂದುವರೆಸಬೇಕೇ, ಬೇಡವೇ ಎಂಬುದರ ಕುರಿತು ವೈದ್ಯರು ನಿರ್ಧಾರ ತೆಗೆದುಕೊಳ್ಳಬಹುದಾಗಿದೆ. ಗರ್ಭಪಾತ ಮಾಡಿದಲ್ಲಿ ಭ್ರೂಣವನ್ನು ಡಿಎನ್ಎ ಪರೀಕ್ಷೆಗಾಗಿ ಬೆಂಗಳೂರಿನ ಕೇಂದ್ರ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಬೇಕು ಎಂದು ಪೀಠ ಹೇಳಿದೆ.
ಅಲ್ಲದೇ, ಚಿಕಿತ್ಸೆಗಾಗಿ ಸಂತ್ರಸ್ತೆ ಮತ್ತವರ ಪೋಷಕರು ಆಸ್ಪತ್ರೆಗೆ ಕರೆದೊಯ್ಯಲು ಮತ್ತು ಅಲ್ಲಿಂದ ಮನೆಗೆ ಕರೆದುಕೊಂಡು ಬರುವುದು ಹಾಗೂ ಹೆಚ್ಚುವರಿ ಚಿಕಿತ್ಸೆಗಾಗಿ ಮತ್ತೊಂದೆಡೆ ಹೋಗಬೇಕಾದರೂ ಸ್ಥಳೀಯ ಪೊಲೀಸ್ ಠಾಣೆಯಿಂದ ಉಚಿತವಾಗಿ ವಾಹನವನ್ನು ವ್ಯವಸ್ಥೆ ಮಾಡಬೇಕು. ಆದೇಶಕ್ಕೆ ಸಂಬಂಧಿಸಿದಂತೆ ಮುಂದಿನ ಎರಡು ವಾರಗಳಲ್ಲಿ ವಸ್ತುಸ್ಥಿತಿ ವರದಿ ಸಲ್ಲಿಸಬೇಕು ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಸಂತ್ರಸ್ತೆಯ ತಾಯಿ 2025ರ ಜ.16ರಂದು ಪೊಲೀಸರಿಗೆ ದೂರು ನೀಡಿ, ನನ್ನ 16 ವರ್ಷದ ಮಗಳ ಮೇಲೆ ಯುವಕನೊಬ್ಬ ಕಳೆದ ಆರು - ಏಳು ತಿಂಗಳಿಂದ ನಿಂತರವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಇದರಿಂದ ಪುತ್ರಿ ಗರ್ಭ ಧರಿಸಿದ್ದಾಳೆ ಎಂದು ಆರೋಪಿಸಿದ್ದರು. ಪೊಲೀಸರು ಆರೋಪಿಯನ್ನು ಬಂಧಿಸಿ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದರು. ಜನವರಿ 18 ರಂದು ಸಂತ್ರಸ್ತೆಯನ್ನು ವೈದ್ಯಕೀಯ ತಪಾಸಣೆ ನಡೆಸಿದಾಗ, ಆಕೆಗೆ ಗರ್ಭಕ್ಕೆ 26 ವಾರ, 6 ದಿನ ಆಗಿರುವುದು ತಿಳಿದಿತ್ತು.
ಇದನ್ನೂ ಓದಿ: ಶಾಸಕ ವಿನಯ್ ಕುಲಕರ್ಣಿ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್
ಈ ಮಧ್ಯೆ ಗರ್ಭಪಾತಕ್ಕೆ ಅನುಮತಿ ನೀಡುವಂತೆ ಕೋರಿ ಮಕ್ಕಳ ಕಲ್ಯಾಣ ಸಮಿತಿಗೆ ಸಂತ್ರಸ್ತೆ ಮತ್ತು ಆಕೆಯ ತಾಯಿ ಕೋರಿದ್ದರು. ಸಮಿತಿಯು 2025ರ ಜ.21ರಂದು ಈ ಕುರಿತು ವರದಿ ನೀಡಿತ್ತು. ನಂತರ ಸಂತ್ರಸ್ತೆಯನ್ನು ಸರ್ಕಾರಿ ಮಕ್ಕಳ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಇದೀಗ ತನ್ನ ತಾಯಿ ಮೂಲಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಸಂತ್ರಸ್ತೆ, ವೈದ್ಯಕೀಯ ಗರ್ಭಪಾತಕ್ಕೆ ಅವಕಾಶ ಕಲ್ಪಿಸಬೇಕು. ಗರ್ಭಪಾತ ಮಾಡಲು ವೈದ್ಯಕೀಯ ಮಂಡಳಿ ರಚನೆ ಮಾಡಲು ವಾಣಿವಿಲಾಸ ಆಸ್ಪತ್ರೆಗೆ ನಿರ್ದೇಶಿಸಬೇಕು ಎಂದು ಕೋರಿದ್ದರು.
ಅರ್ಜಿಯ ಸಂಬಂಧ ಈ ಹಿಂದೆ ವಿಚಾರಣೆ ನಡೆಸಿದ್ದ ನ್ಯಾಯಪೀಠ, ವಾಣಿ ವಿಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಸೋಮವಾರದೊಳಗೆ ಸಂತ್ರಸ್ತೆಯ ತಪಾಸಣೆಗೆ ವೈದ್ಯಕೀಯ ಮಂಡಳಿ ರಚಿಸಬೇಕು. ಬಳಿಕ ಸಂತ್ರಸ್ತೆ ಹಾಜರಾಗಬೇಕು. ಸಂತ್ರಸ್ತೆಗೆ ವೈದ್ಯಕೀಯ ಗರ್ಭಪಾತ ಮಾಡುವ ಸಾಧ್ಯತೆ ಬಗ್ಗೆ ಮಂಡಳಿ ತಪಾಸಣೆ ನಡೆಸಿ, ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿತ್ತು. ವೈದ್ಯರ ವರದಿಯ ಆಧಾರದಲ್ಲಿ ಕೋರ್ಟ್ ಈ ಆದೇಶ ಮಾಡಿದೆ.
ಇದನ್ನೂ ಓದಿ: ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣಗೆ ಜೈಲು ಶಿಕ್ಷೆ