ಕೊಚ್ಚಿ, ಕೇರಳ: ಕೊಚ್ಚಿಯಲ್ಲಿ ಅಕ್ರಮವಾಗಿ ನೆಲೆಸಿದ್ದ 27 ಬಾಂಗ್ಲಾದೇಶಿಗಳನ್ನು ಬಂಧಿಸಿರುವುದಾಗಿ ಎರ್ನಾಕುಲಂ ಗ್ರಾಮೀಣ ಜಿಲ್ಲಾ ಪೊಲೀಸ್ ಮುಖ್ಯಸ್ಥ ವೈಭವ್ ಸಕ್ಸೇನಾ ತಿಳಿಸಿದ್ದಾರೆ.
ಎರ್ನಾಕುಲಂ ಜಿಲ್ಲೆಯ ಉತ್ತರ ಪರವೂರ್ ಪ್ರದೇಶದಲ್ಲಿ ಎರ್ನಾಕುಲಂ ಗ್ರಾಮಾಂತರ ಪೊಲೀಸರು ಮತ್ತು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಆಧಾರ್ ಕಾರ್ಡ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ.
ಭಾರತದ ಒಳಗೆ ಅಕ್ರಮವಾಗಿ ನುಸಿಳಿ ಬಂದ ಬಾಂಗ್ಲಾದೇಶಿ ಪ್ರಜೆಗಳು, ತಾವು ಪಶ್ಚಿಮ ಬಂಗಾಳದವರೆಂದು ಹೇಳಿಕೊಂಡು ವಲಸೆ ಕಾರ್ಮಿಕರ ಸೋಗಿನಲ್ಲಿ ಎರ್ನಾಕುಲಂನ ವಿವಿಧ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದರು. ಬಂಧಿತರ ವಿವರವಾದ ವಿಚಾರಣೆ ನಡೆಯುತ್ತಿದೆ. ಈ ಹಂತದಲ್ಲಿ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಇದರೊಂದಿಗೆ, ಇತ್ತೀಚೆಗೆ ಎರ್ನಾಕುಲಂನಲ್ಲಿ ಬಂಧಿಸಲಾದ ಬಾಂಗ್ಲಾದೇಶಿಗಳ ಸಂಖ್ಯೆ 34ಕ್ಕೆ ಏರಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಲವು ಬಾಂಗ್ಲಾದೇಶಿಗಳು ಕೊಚ್ಚಿಗೆ ಅಕ್ರಮವಾಗಿ ಪ್ರವೇಶಿಸಿದ್ದಾರೆ ಎಂಬ ಗುಪ್ತಚರ ಘಟಕದ ಮಾಹಿತಿಯ ಆಧಾರದ ಮೇಲೆ ಎರ್ನಾಕುಲಂ ಗ್ರಾಮೀಣ ಜಿಲ್ಲಾ ಪೊಲೀಸ್ ಮುಖ್ಯಸ್ಥ ವೈಭವ್ ಸಕ್ಸೇನಾ ಅವರು ಪ್ರಾರಂಭಿಸಿದ 'ಆಪರೇಷನ್ ಕ್ಲೀನ್' ಎಂಬ ವಿಶೇಷ ಕಾರ್ಯಾಚರಣೆಯ ಭಾಗವಾಗಿ ಈ ಬಂಧನ ಪ್ರಕರಣಗಳು ಬೆಳಕಿಗೆ ಬರಲಾರಂಭಿಸಿವೆ.
'ಆಪರೇಷನ್ ಕ್ಲೀನ್' ಭಾಗವಾಗಿ ನಿನ್ನೆಯಷ್ಟೇ ಅಕ್ರಮವಾಗಿ ನೆಲೆಸಿದ್ದ ಇಬ್ಬರು ಬಾಂಗ್ಲಾದೇಶಿ ಮಹಿಳೆಯರನ್ನು ಪೊಲೀಸ್ ವಶಕ್ಕೆ ತೆಗೆದುಕೊಂಡಿದ್ದರು. ಫೆಬ್ರವರಿ 2024ರಿಂದ ಕೇರಳದಲ್ಲೇ ಉಳಿದುಕೊಂಡಿದ್ದ ಬಾಂಗ್ಲಾದೇಶದ ಚುಂಗಲಾ ಮೂಲದ ರುಬಿನಾ (20) ಮತ್ತು ಶಕ್ತಿಪುರದ ಮೂಲದ ಕುಲ್ಸುಮ್ ಅಖ್ತರ್ (23) ಎಂಬ ಇಬ್ಬರು ಮಹಿಳೆಯರನ್ನು ನಿನ್ನೆಯಷ್ಟೇ ಕೊಡನಾಡ್ ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರು ಪಶ್ಚಿಮ ಬಂಗಾಳದಿಂದ ಅಕ್ರಮವಾಗಿ ಗಡಿ ದಾಟಿ ಬಂದಿದ್ದಲ್ಲದೇ ಏಜೆಂಟರ್ ಮೂಲಕ ತಮ್ಮ ಆಧಾರ್ ಕಾರ್ಡ್‌ಗಳನ್ನು ಪಡೆದಿರುವುದು ತನಿಖೆ ವೇಳೆ ಗೊತ್ತಾಗಿದೆ. ಮಹಿಳೆಯರಿಗೆ ಸಹಾಯ ಮಾಡಿದವರ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.
ಅದಕ್ಕೂ ಮುನ್ನ ಅಕ್ರಮವಾಗಿ ನೆಲೆಸಿದ್ದ ತಸ್ಲಿಮಾ ಬೇಗಂ ಎಂಬ ಯುವತಿಯನ್ನು ಬಂಧಿಸಲಾಗಿತ್ತು. ಇವಳ ಬಂಧನದ ಬೆನ್ನಲ್ಲೇ 'ಆಪರೇಷನ್ ಕ್ಲೀನ್' ಕಾರ್ಯಾಚರಣೆಗೆ ಮುಂದಾಗಿತ್ತು. ಸದ್ಯ ಪೊಲೀಸರು ಅಕ್ರಮ ಗಡಿ ದಾಟುವಿಕೆ ಮತ್ತು ನಕಲಿ ಐಡಿಗಳು ಮತ್ತು ಆಧಾರ್ ಕಾರ್ಡ್‌ಗಳನ್ನು ನೀಡುವ ಏಜೆಂಟ್‌ಗಳನ್ನು ಪತ್ತೆಹಚ್ಚುವಲ್ಲಿ ನಿರತರಾಗಿದ್ದಾರೆ.
ಬಾಂಗ್ಲಾದೇಶಿಗರು ಅಕ್ರಮವಾಗಿ ವಾಸಿಸುತ್ತಿರುವ ಬಗ್ಗೆ ಮಾಹಿತಿ ಬಂದರೆ, 9995214561 ಸಂಖ್ಯೆಗೆ ಸಂಪರ್ಕಿಸುವಂತೆ ಎರ್ನಾಕುಲಂ ಗ್ರಾಮೀಣ ಪೊಲೀಸರು ತಿಳಿಸಿದ್ದಾರೆ.