ಕರ್ನಾಟಕ

karnataka

ETV Bharat / bharat

ಟ್ರಕ್‌ಗೆ ಗುದ್ದಿದ ಕಾರಿನಲ್ಲಿ ಬೆಂಕಿ: ಮಕ್ಕಳು, ಮಹಿಳೆಯರು ಸೇರಿ ಏಳು ಮಂದಿ ಸಜೀವ ದಹನ - Car Truck collision

ಚಲಿಸುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಏಳು ಮಂದಿ ಸಜೀವ ದಹನವಾಗಿರುವ ಘಟನೆ ರಾಜಸ್ಥಾನದ ಸಿಕರ್ ಜಿಲ್ಲೆಯಲ್ಲಿ ನಡೆದಿದೆ.

Two kids among 7 burnt alive in car-truck collision in Rajasthan
ಟ್ರಕ್‌ಗೆ ಗುದ್ದಿದ ಕಾರಿನಲ್ಲಿ ಬೆಂಕಿ: ಮಕ್ಕಳು, ಮಹಿಳೆಯರು ಸೇರಿ ಏಳು ಮಂದಿ ಸಜೀವ ದಹನ

By PTI

Published : Apr 14, 2024, 5:23 PM IST

Updated : Apr 14, 2024, 7:47 PM IST

ಜೈಪುರ (ರಾಜಸ್ಥಾನ): ರಾಜಸ್ಥಾನದ ಸಿಕರ್ ಜಿಲ್ಲೆಯಲ್ಲಿ ಭಾನುವಾರ ಭೀಕರ ದುರಂತ ಸಂಭವಿಸಿದೆ. ಕಾರು ಮತ್ತು ಟ್ರಕ್ ನಡುವೆ ಡಿಕ್ಕಿ ಹೊಡೆದ ನಂತರ ಬೆಂಕಿ ಹೊತ್ತುಕೊಂಡು ಇಬ್ಬರು ಮಕ್ಕಳು, ಮೂವರು ಮಹಿಳೆಯರು ಸೇರಿದಂತೆ ಏಳು ಮಂದಿ ಸಜೀವ ದಹನವಾಗಿದ್ದಾರೆ. ಮೃತರೆಲ್ಲರೂ ದೇವಸ್ಥಾನದಿಂದ ಮರಳುತ್ತಿದ್ದರು ಎಂದು ವರದಿಯಾಗಿದೆ.

ಇಲ್ಲಿನ ಆರ್ಶಿವಾದ್ ಪುಲಿಯಾ ಬಳಿ ಚಲಿಸುತ್ತಿದ್ದ ಟ್ರಕ್‌ಗೆ ಹಿಂದಿನಿಂದ ಕಾರು ಗುದ್ದಿದೆ. ಇದರ ಪರಿಣಾಮ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಹೀಗಾಗಿ ಕಾರಿನಲ್ಲಿದ್ದ ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಫತೇಪುರ್ ಸರ್ಕಲ್​ ಪೊಲೀಸ್ ಉಪ ಅಧೀಕ್ಷಕ ರಾಮಪ್ರತಾಪ್ ಬಿಷ್ಣೋಯ್ ತಿಳಿಸಿದ್ದಾರೆ.

ಮೃತರು ಎಲ್ಲರೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಇವರೆಲ್ಲರೂ ಉತ್ತರ ಪ್ರದೇಶದ ಮೀರತ್ ನಿವಾಸಿಗಳು ಎಂದು ಗೊತ್ತಾಗಿದೆ. ಸಲಾಸರ್ ಬಾಲಾಜಿ ದೇವಸ್ಥಾನದಿಂದ ಹಿಸಾರ್‌ಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಬೆಂಕಿಯಿಂದಾಗಿ ಕಾರಿನ ಬಾಗಿಲು ತೆರೆಯಲು ಸಾಧ್ಯವಾಗದೆ ಏಳು ಜನರೂ ಸಜೀವ ದಹನವಾಗಿದ್ದಾರೆ. ಮೃತರ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಕೋಟಾದಲ್ಲಿ ಹಾಸ್ಟೆಲ್​ಗೆ ಬೆಂಕಿ-ಎಂಟು ವಿದ್ಯಾರ್ಥಿಗಳಿಗೆ ಗಾಯ: ಮತ್ತೊಂದೆಡೆ, ಕೋಟಾ ಜಿಲ್ಲೆಯಲ್ಲಿ ಬಾಲಕರ ಹಾಸ್ಟೆಲ್ ಕಟ್ಟಡದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ಈ ಘಟನೆಯಲ್ಲಿ ಎಂಟು ಜನ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುನ್ಹಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಲ್ಯಾಂಡ್‌ಮಾರ್ಕ್ ಸಿಟಿಯಲ್ಲಿ ಬೆಳಗ್ಗೆ 6.15ರ ಸುಮಾರಿಗೆ ಈ ಘಟನೆ ನಡೆದಿದೆ. ಐದು ಅಂತಸ್ತಿನ ಹಾಸ್ಟೆಲ್ ಕಟ್ಟಡದ ನೆಲ ಮಹಡಿಯಲ್ಲಿ ಅಳವಡಿಸಲಾದ ವಿದ್ಯುತ್ ಟ್ರಾನ್ಸ್​ಫಾರ್ಮರ್​ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ. ನಂತರ ಬೆಂಕಿ ಕಾಣಿಸಿಕೊಂಡಿದೆ. ಹೀಗಾಗಿ ಓರ್ವ ವಿದ್ಯಾರ್ಥಿ ತೀವ್ರವಾಗಿ ಸುಟ್ಟುಗಾಯಗೊಂಡಿದ್ದು, ಇತರ ಆರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಇದೇ ವೇಳೆ, ಬೆಂಕಿಯಿಂದ ತಪ್ಪಿಸಿಕೊಳ್ಳಲು ಇತರ 14 ಮಂದಿ ಕಟ್ಟಡದ ಮೊದಲ ಮಹಡಿಯಿಂದ ಜಿಗಿದಿದ್ದಾರೆ. ಇದರಿಂದ ಒಬ್ಬ ವಿದ್ಯಾರ್ಥಿ ಕಾಲು ಮುರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋಟಾ ಮಹಾನಗರ ಪಾಲಿಕೆಯ ಅಗ್ನಿಶಾಮಕ ಅಧಿಕಾರಿ ರಾಕೇಶ್ ವ್ಯಾಸ್ ಮಾತನಾಡಿ, ಹಾಸ್ಟೆಲ್ ಕಟ್ಟಡವು ಅಗ್ನಿ ಸುರಕ್ಷತಾ ಕ್ರಮಗಳನ್ನು ಹೊಂದಿಲ್ಲ. ಅಗ್ನಿಶಾಮಕ ಎನ್‌ಒಸಿ ಹೊಂದಿಲ್ಲ. ಹಾಸ್ಟೆಲ್ ಕಟ್ಟಡದೊಳಗೆ ಟ್ರಾನ್ಸ್‌ಫಾರ್ಮರ್ ಅಳವಡಿಸಿರುವುದು ಆತಂಕಕಾರಿಯಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಇಸ್ರೇಲ್-ಇರಾನ್ ಸಂಘರ್ಷದ ಬಗ್ಗೆ ಭಾರತ ಕಳವಳ, ಶಾಂತಿ ಸಂಧಾನಕ್ಕೆ ಕರೆ

Last Updated : Apr 14, 2024, 7:47 PM IST

ABOUT THE AUTHOR

...view details