ಚೆಂಗಲ್ಪಟ್ಟು(ತಮಿಳುನಾಡು): ಅತೀ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ರಸ್ತೆಬದಿ ಕುಳಿತಿದ್ದ ಐವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಾಮಲ್ಲಪುರಂನ ಪಂಡಿತಮೇಡು ಗ್ರಾಮದ ಮಹಾಬಲಿಪುರಂ ಹೆದ್ದಾರಿಯಲ್ಲಿ ನಡೆದಿದೆ. 50 ವರ್ಷ ಮೇಲ್ಪಟ್ಟ ಕಥಾಯ್, ವಿಜಯ, ಗೌರಿ, ಲೋಕಮ್ಮಾಳ್ ಮತ್ತು ಯಶೋದಾ ಮೃತರು. ಮಹಿಳೆಯರು ಹಸುಗಳನ್ನು ಮೇಯಲು ಬಿಟ್ಟು ರಸ್ತೆಬದಿ ಕುಳಿತಿದ್ದಾಗ ಈ ದುರ್ಘಟನೆ ನಡೆದಿದೆ.
ಘಟನೆ ನಡೆದ ತಕ್ಷಣ ಸ್ಥಳೀಯರು ಕಾರು ಚಾಲಕ ಸೇರಿ ಇಬ್ಬರನ್ನು ಹಿಡಿದು, ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು, ಮಹಿಳೆಯರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಚೆಂಗಲ್ಪಟ್ಟು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ನಂತರ ಕಾರು ಚಾಲಕ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆದು ಪೊಲೀಸ್ ವಾಹನದ ಮೂಲಕ ಮಾಮಲ್ಲಪುರಂ ಠಾಣೆಗೆ ಕರೆದೊಯ್ಯಲು ಪೊಲೀಸರು ಮುಂದಾಗಿದ್ದಾರೆ. ಈ ವೇಳೆ ಅಲ್ಲಿ ನೆರೆದಿದ್ದ ಗ್ರಾಮಸ್ಥರು ಅಮಾಯಕ ಮಹಿಳೆಯರ ಸಾವಿಗೆ ಕಾರಣರಾದವರನ್ನು ತಮಗೆ ಒಪ್ಪಿಸುವಂತೆ ಆಗ್ರಹಿಸಿ ರಸ್ತೆಯಲ್ಲೇ ಕುಳಿತು ಪ್ರತಿಭಟಿಸಿದ್ದಾರೆ. ಇದರಿಂದ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಅಪಘಾತ ಮಾಡಿದ ಕಾರು ಚಾಲಕ ಸೇರಿದಂತೆ ಕಾರಿನಲ್ಲಿದ್ದವರು ಮದ್ಯದ ಅಮಲಿನಲ್ಲಿದ್ದರು. ಇಬ್ಬರನ್ನು ಬಂಧಿಸಲಾಗಿದ್ದು, ಉಳಿದವರು ಪರಾರಿಯಾಗಿದ್ದಾರೆ. ಅವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2 ಲಕ್ಷ ಪರಿಹಾರ ಘೋಷಿಸಿದ ಸಿಎಂ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಅಪಘಾತದಲ್ಲಿ ಸಾವನ್ನಪ್ಪಿದ ಐವರು ಮಹಿಳೆಯರ ಕುಟುಂಬಗಳಿಗೆ ತಲಾ 2 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.
ಇದನ್ನೂ ಓದಿ: ಎಕ್ಸ್ಪ್ರೆಸ್ವೇಯಲ್ಲಿ ಭೀಕರ ರಸ್ತೆ ಅಪಘಾತ: ನಾಲ್ವರು ವೈದ್ಯರ ದುರ್ಮರಣ