ಶ್ರೀನಗರ: ಲೋಕಸಭಾ ಚುನಾವಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಸೋಲು ಅನುಭವಿಸಿದ ಬೆನ್ನಲ್ಲೇ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಕೂಡ ಸೋಲು ಕಂಡಿದ್ದಾರೆ.
ಒಮರ್ ಅಬ್ದುಲ್ಲಾ ಅವರು ಅವಾಮಿ ಇತಿಹಾದ್ ಪಕ್ಷದ (ಎಐಪಿ) ಎಂಜಿನಿಯರ್ ರಶೀದ್ ವಿರುದ್ಧ ಸೋತರೆ, ಮೆಹಬೂಬಾ ಮುಫ್ತಿ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಅಭ್ಯರ್ಥಿ ಮಿಯಾಂ ಅಲ್ತಾಫ್ ಅಹ್ಮದ್ ಅವರನ್ನು 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ.
"ಜನರ ತೀರ್ಪನ್ನು ಗೌರವಿಸುತ್ತೇನೆ. ಎಲ್ಲಾ ಅಡೆತಡೆಗಳ ನಡುವೆಯೂ ಕಠಿಣ ಪರಿಶ್ರಮ ಮತ್ತು ಬೆಂಬಲಕ್ಕಾಗಿ ನನ್ನ ಪಿಡಿಪಿ ಕಾರ್ಯಕರ್ತರು ಮತ್ತು ನಾಯಕರಿಗೆ ಧನ್ಯವಾದಗಳು. ನನಗೆ ಮತ ನೀಡಿದ ಜನರಿಗೆ ಕೃತಜ್ಞತೆಗಳು. ಗೆಲುವು ಮತ್ತು ಸೋಲು ಆಟದ ಒಂದು ಭಾಗವಾಗಿದೆ ಮತ್ತು ಈ ಸೋಲು ನಮ್ಮ ಗುರಿಯಿಂದ ನಮ್ಮನ್ನು ವಿಮುಖಗೊಳಿಸಲಾರದು." ಎಂದು ಮುಫ್ತಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಶ್ರೀನಗರ ಲೋಕಸಭಾ ಕ್ಷೇತ್ರದಲ್ಲಿ ಎನ್ಸಿಯ ಸೈಯದ್ ರುಹುಲ್ಲಾ ಮೆಹ್ದಿ ಅವರು ತಮ್ಮ ಪಿಡಿಪಿ ಪ್ರತಿಸ್ಪರ್ಧಿ ವಹೀದ್ ಪರ್ರಾ ವಿರುದ್ಧ ಸಾಕಷ್ಟು ಹೆಚ್ಚಿನ ಮತಗಳ ಅಂತರದ ಲೀಡ್ ಪಡೆದುಕೊಂಡಿದ್ದಾರೆ. ಜಮ್ಮು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಜುಗಲ್ ಕಿಶೋರ್ ಶರ್ಮಾ ಅವರು ಕಾಂಗ್ರೆಸ್‌ನ ರಮಣ್ ಭಲ್ಲಾ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.