ನವದೆಹಲಿ:ಒಂದೇ ಕುಟುಂಬದ ಮೂವರನ್ನು ಚೂರಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ದಕ್ಷಿಣ ದೆಹಲಿಯ ನೆಬ್ ಸರೈ ಪೊಲೀಸ್ ಠಾಣೆ ವ್ಯಾಪ್ತಿಯ ಡಿಯೋಲಿ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಮನೆಯ ಮಗ ಬೆಳಗಿನ ವಾಕಿಂಗ್‌ಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಆ ಸಂದರ್ಭ ಮನೆಯಲ್ಲಿ ಅವರ ತಾಯಿ, ತಂದೆ, ತಂಗಿ ಮೂವರೂ ಇದ್ದರು. ಆಗ ಯಾರೋ ಅಪರಿಚಿತ ಮನೆಗೆ ನುಗ್ಗಿ ಮೂವರಿಗೂ ಚಾಕುವಿನಿಂದ ಇರಿದಿದ್ದಾರೆ.
ರಾಜೇಶ್ (55), ಕೋಮಲ್ (47) ಮತ್ತು ಅವರ ಪುತ್ರಿ ಕವಿತಾ (23) ಮೃತರು. ವಾಕ್ ಮುಗಿಸಿ ಹಿಂತಿರುಗಿದಾಗ ಮನೆಯಲ್ಲಿ ಮೂವರೂ ರಕ್ತದಲ್ಲಿ ಮಡುವಲ್ಲಿ ಬಿದ್ದಿರುವುದನ್ನು ಕಂಡಿದ್ದಾನೆ. ಅಧಿಕ ರಕ್ತಸ್ರಾವದಿಂದ ಮೂವರೂ ಅದಾಗಲೇ ಸಾವನ್ನಪ್ಪಿದ್ದಾರೆ. ಘಟನೆ ವಿಚಾರ ತಿಳಿಯುತ್ತಿದ್ದಂತೆ ಮನೆಯ ಹೊರಗೆ ಜನರು ಜಮಾಯಿಸಿದ್ದಾರೆ.
ಮಾಹಿತಿ ಸಿಕ್ಕ ತಕ್ಷಣ ದೆಹಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಕರಣವನ್ನು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಧಾರವಾಡ: ಮನೆಗೆ ಬಂದು ವ್ಯಕ್ತಿಯನ್ನು ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು: ಆರೋಪಿಗಳಿಗಾಗಿ ತಲಾಶ್