ಬಲಂಗಿರ್(ಒಡಿಶಾ):ತನ್ನ ಜಮೀನಿನಲ್ಲಿದ್ದ ಬೆಳೆಯನ್ನು ಟ್ರಾಕ್ಟರ್ ಮೂಲಕ ನಾಶಪಡಿಸಿದ್ದನ್ನು ವಿರೋಧಿಸಿದ ಬುಡಕಟ್ಟು ಯುವತಿಯ ಬಾಯಿಗೆ ಬಲವಂತವಾಗಿ ಮಾನವ ಮಲ ತಿನ್ನಿಸಿದ ಅಮಾನವೀಯ ಘಟನೆ ಒಡಿಶಾದ ಬಲಂಗಿರ್ ಜಿಲ್ಲೆಯಲ್ಲಿ ನಡೆದಿದೆ.
ನವೆಂಬರ್ 16ರಂದು ಬಂಗೋಮುಂಡ ಪೊಲೀಸ್ ಠಾಣಾ ವ್ಯಾಪ್ತಿಯ ಜುರಬಂಧ ಗ್ರಾಮದಲ್ಲಿ ಘಟನೆ ನಡೆದಿದ್ದು, ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ.
"20 ವರ್ಷದ ಬುಡಕಟ್ಟು ಸಮುದಾಯದ ಯುವತಿ ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಅಭಯ್ ಬಾಗ್ ಎಂಬಾತ ಆಕೆಯ ಕೃಷಿ ಭೂಮಿಗೆ ಟ್ರ್ಯಾಕ್ಟರ್ ಹತ್ತಿಸಿ ಬೆಳೆ ಹಾನಿಗೊಳಿಸಿದ್ದಾನೆ. ಇದನ್ನು ಆಕೆ ವಿರೋಧಿಸಿದ್ದಾಳೆ. ಬಳಿಕ ಯುವತಿ ಗ್ರಾಮದ ಸಮೀಪದ ಕೊಳದಿಂದ ಹಿಂತಿರುಗುತ್ತಿದ್ದಾಗ ಆರೋಪಿ ಟ್ರ್ಯಾಕ್ಟರ್ ಚಾಲಕ, ಆಕೆಯ ಮೇಲೆ ಹಲ್ಲೆ ನಡೆಸಿ ಬಲವಂತವಾಗಿ ಮನುಷ್ಯನ ಮಲ ತಿನ್ನಿಸಿದ್ದಾನೆ" ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
"ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಆರೋಪಿ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಶೋಧ ನಡೆಯುತ್ತಿದೆ" ಎಂದು ಕಾಂತಾಬಂಜಿ ಎಸ್‌ಡಿಪಿಒ ಗೌರಂಗ್ ಚರಣ್ ಸಾಹು ಹೇಳಿದರು.