ನವದೆಹಲಿ: ಯೆಮೆನ್ ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವುದಾಗಿ ಭಾರತ ಮಂಗಳವಾರ ಪ್ರಕಟಿಸಿದೆ. ಯೆಮೆನ್ ಪ್ರಜೆಯೊಬ್ಬರನ್ನು ಕೊಲೆ ಮಾಡಿದ ಆರೋಪದ ಮೇಲೆ ನಿಮಿಷಾರಿಗೆ ಮರಣ ದಂಡನೆ ವಿಧಿಸಲಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, "ಯೆಮನ್ನಲ್ಲಿ ನಿಮಿಷಾ ಪ್ರಿಯಾ ಅವರಿಗೆ ಶಿಕ್ಷೆ ವಿಧಿಸಿರುವ ಬಗ್ಗೆ ತಿಳಿದು ಬಂದಿದೆ. ಶ್ರೀಮತಿ ಪ್ರಿಯಾ ಅವರ ಕುಟುಂಬವು ಅವರನ್ನು ಉಳಿಸಿಕೊಳ್ಳಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಈ ವಿಷಯದಲ್ಲಿ ಸರ್ಕಾರವು ಸಾಧ್ಯವಿರುವ ಎಲ್ಲ ಸಹಾಯ ನೀಡುತ್ತಿದೆ" ಎಂದು ತಿಳಿಸಿದರು.
ಮರಣದಂಡನೆ ಅಂಗೀಕರಿಸಿದ ಯೆಮೆನ್ ಅಧ್ಯಕ್ಷ: ನಿಮಿಷಾ ಪ್ರಿಯಾ ಅವರಿಗೆ ಮರಣದಂಡನೆಯ ಶಿಕ್ಷೆಯನ್ನು ಯೆಮೆನ್ ಅಧ್ಯಕ್ಷ ರಶಾದ್ ಅಲ್-ಅಲಿಮಿ ಇತ್ತೀಚೆಗೆ ಅಂಗೀಕರಿಸಿದ್ದಾರೆ. ಒಂದು ತಿಂಗಳೊಳಗೆ ಶಿಕ್ಷೆ ಜಾರಿಯಾಗುವ ಸಾಧ್ಯತೆಗಳಿರುವುದರಿಂದ ಆಘಾತಕ್ಕೊಳಗಾಗಿರುವ ಕುಟುಂಬ ಅವರ ರಕ್ಷಣೆಗೆ ಮೊರೆ ಇಟ್ಟಿದೆ.
ಮಗಳನ್ನು ಮರಣದಂಡನೆ ಶಿಕ್ಷೆಯಿಂದ ಪಾರು ಮಾಡಲು ಅವರ ತಾಯಿ ಪ್ರೇಮಾ ಕುಮಾರಿ (57) ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ, ಯೆಮೆನ್ ಮೂಲದ ಎನ್ಆರ್ಐ ಸಾಮಾಜಿಕ ಕಾರ್ಯಕರ್ತರ ಸಂಘಟನೆಯಾದ ಸೇವ್ ನಿಮಿಷಾ ಪ್ರಿಯಾ ಇಂಟರ್ ನ್ಯಾಷನಲ್ ಆಕ್ಷನ್ ಕೌನ್ಸಿಲ್ ಸಹಾಯದಿಂದ ಕೊಲೆಗೀಡಾದವರ ಕುಟುಂಬಕ್ಕೆ ದಿಯಾ (ರಕ್ತದ ಹಣ) ಮೊತ್ತ ಪಾವತಿಸುವ ಬಗ್ಗೆ ಮಾತುಕತೆ ನಡೆಸಲು ಅವರು ಯೆಮನ್ ರಾಜಧಾನಿ ಸನಾಗೆ ಪ್ರಯಾಣಿಸಿದ್ದರು.
2008ರಲ್ಲಿ ಯೆಮೆನ್ಗೆ ತೆರಳಿದ್ದ ನಿಮಿಷಾ ಪ್ರಿಯಾ: ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೊಲ್ಲೆಂಗೋಡ್ ಮೂಲದ ನರ್ಸ್ ನಿಮಿಷಾ ಪ್ರಿಯಾ 2008ರಲ್ಲಿ ಯೆಮನ್ಗೆ ತೆರಳಿದ್ದರು. ಅಲ್ಲಿನ ಹಲವಾರು ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ ನಂತರ ಅವರು ತಮ್ಮದೇ ಆದ ಆಸ್ಪತ್ರೆಯೊಂದನ್ನು ಆರಂಭಿಸಿದ್ದರು. 2017 ರಲ್ಲಿ ಅವರು ಮತ್ತು ಅವರ ಯೆಮೆನ್ ವ್ಯವಹಾರ ಪಾಲುದಾರ ತಲಾಲ್ ಅಬ್ದೋ ಮಹ್ದಿ ನಡುವೆ ವಿವಾದ ಉಂಟಾಗಿತ್ತು.
ಈ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾದ ತನ್ನ ಪಾಸ್ ಪೋರ್ಟ್ ಅನ್ನು ಹಿಂಪಡೆಯಲು ನಿಮಿಷಾ ಮಹ್ದಿಗೆ ನಿದ್ರೆಯ ಇಂಜೆಕ್ಷನ್ಗಳನ್ನು ನೀಡಿದ್ದರು. ಆದರೆ ದುರದೃಷ್ಟವಶಾತ್ ಓವರ್ ಡೋಸ್ ಆಗಿದ್ದರಿಂದ ಮಹ್ದಿ ಮೃತಪಟ್ಟಿದ್ದರು. ಇದರ ನಂತರ ದೇಶದಿಂದ ಪಲಾಯನ ಮಾಡಲು ಯತ್ನಿಸುತ್ತಿರುವಾಗ ಆಕೆಯನ್ನು ಬಂಧಿಸಿ 2018ರಲ್ಲಿ ಕೊಲೆ ಪ್ರಕರಣದಲ್ಲಿ ಶಿಕ್ಷೆ ವಿಧಿಸಲಾಗಿತ್ತು.
2020 ರಲ್ಲಿ, ಸನಾದ ವಿಚಾರಣಾ ನ್ಯಾಯಾಲಯವು ಅವರಿಗೆ ಮರಣದಂಡನೆ ವಿಧಿಸಿತ್ತು. ಯೆಮೆನ್ನ ಸುಪ್ರೀಂ ಜ್ಯುಡಿಷಿಯಲ್ ಕೌನ್ಸಿಲ್ ನವೆಂಬರ್ 2023 ರಲ್ಲಿ ಈ ತೀರ್ಪನ್ನು ಎತ್ತಿಹಿಡಿದಿತ್ತು. ಆದರೂ ರಕ್ತದ ಹಣ ಪಾವತಿಸಿ ಶಿಕ್ಷೆಯಿಂದ ಪಾರಾಗುವ ಅವಕಾಶವನ್ನು ಅದು ಮುಕ್ತವಾಗಿಟ್ಟಿತ್ತು.
ಇದನ್ನೂ ಓದಿ : ರೈಲಿನಡಿ ತಳ್ಳಿ ಯುವತಿ ಕೊಂದಿದ್ದ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿದ ಚೆನ್ನೈ ಮಹಿಳಾ ಕೋರ್ಟ್ - CHENNAI WOMENS COURT ORDER