ಕರ್ನಾಟಕ

karnataka

ETV Bharat / bharat

'ಕನಿಷ್ಠ ದೇವರನ್ನಾದರೂ ರಾಜಕೀಯದಿಂದ ದೂರವಿಡಿ': ತಿರುಪತಿ ಲಡ್ಡು ವಿವಾದದ ಬಗ್ಗೆ ಸುಪ್ರೀಕೋರ್ಟ್​ ಬೇಸರ - Tirupati laddu row - TIRUPATI LADDU ROW

ತಿರುಪತಿ ಲಡ್ಡಿಗೆ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣವಾಗಿದೆ ಎಂಬ ಆರೋಪದ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂಕೋರ್ಟ್​ ವಿಚಾರಣೆ ಆರಂಭಿಸಿದೆ.

ರುಪತಿ ಲಡ್ಡು ವಿವಾದದ ಬಗ್ಗೆ ಸುಪ್ರೀಕೋರ್ಟ್​ ಬೇಸರ
ರುಪತಿ ಲಡ್ಡು ವಿವಾದದ ಬಗ್ಗೆ ಸುಪ್ರೀಕೋರ್ಟ್​ ಬೇಸರ (ETV Bharat)

By PTI

Published : Sep 30, 2024, 3:38 PM IST

ನವದೆಹಲಿ:ತಿರುಪತಿ ಲಡ್ಡು ಕಲಬೆರಕೆ ವಿವಾದದ ಕುರಿತು ಸಲ್ಲಿಕೆಯಾದ ಅರ್ಜಿಗಳನ್ನು ಸುಪ್ರೀಂಕೋರ್ಟ್​ ಸೋಮವಾರ ವಿಚಾರಣೆ ನಡೆಸಿತು. ಪವಿತ್ರ ಧಾರ್ಮಿಕ ಕ್ಷೇತ್ರ, ದೇವರನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿತು.

ತಿರುಪತಿ ಲಡ್ಡಿಗೆ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣವಾಗಿದೆ ಎಂಬ ಆರೋಪದ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರಿದ್ದ ದ್ವಿಸದಸ್ಯ ಪೀಠವು ವಿಚಾರಣೆ ನಡೆಸಿತು.

ತಿರುಪತಿ ಲಡ್ಡು ತಯಾರಿಕೆಗೆ ಬಳಸಿದ ತುಪ್ಪವನ್ನು ಕಲಬೆರಕೆ ಮಾಡಲಾಗಿದೆ ಎಂಬ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರ ಹೇಳಿಕೆಗೆ ಪುರಾವೆ ಕೇಳಿತು. ಜೊತೆಗೆ, ಸಾಂವಿಧಾನಿಕ ಹುದ್ದೆಯಲ್ಲಿದ್ದವರು ಸಾರ್ವಜನಿಕವಾಗಿ ಹೇಳಿಕೆ ನೀಡುವ ವೇಳೆ ಎಚ್ಚರಿಕೆ ವಹಿಸಬೇಕು. ಕೋಟ್ಯಂತರ ಜನರ ಭಾವನೆಗಳ ಮೇಲೆ ಪರಿಣಾಮ ಬೀರುವಂತಹ ಹೇಳಿಕೆ ನೀಡುವುದು ಸೂಕ್ತವಲ್ಲ ಎಂದು ಪೀಠ ಹೇಳಿದೆ.

ವಿವಾದದ ಬಗ್ಗೆ ಸೆಪ್ಟಂಬರ್​ 25 ರಂದು ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಸೆಪ್ಟಂಬರ್​ 26 ರಂದು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಹೀಗಿದ್ದರೂ, ಮುಖ್ಯಮಂತ್ರಿ ನಾಯ್ಡು ಅವರು ಮಾಧ್ಯಮಗಳ ಮುಂದೆ ಲಡ್ಡು ಕಲಬೆರಕೆ ಕುರಿತು ಹೇಳಿಕೆ ನೀಡಿದ್ದು ಯಾಕೆ ಎಂದು ಪ್ರಶ್ನಿಸಿತು.

ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡದ (ಎಸ್​​ಐಟಿ) ಮೂಲಕ ಪ್ರಕರಣದ ವಿಚಾರಣೆ ಮುಂದುವರಿಸಬೇಕೆ ಅಥವಾ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕೇ ಎಂಬುದನ್ನು ನಿರ್ಧರಿಸಲು ಸಲಹೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪೀಠ ಕೋರಿತು.

ದೇವರನ್ನು ರಾಜಕೀಯಕ್ಕೆ ಬಳಸಬೇಡಿ:ದೇವರ ವಿಚಾರದಲ್ಲಿ ರಾಜಕೀಯ ಪಕ್ಷಗಳು ನಡೆದುಕೊಳ್ಳುತ್ತಿರುವ ರೀತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಕೋರ್ಟ್​, ಕನಿಷ್ಠ ದೇವರುಗಳನ್ನಾದರೂ ರಾಜಕೀಯದಿಂದ ದೂರವಿಡಬೇಕು ಎಂದು ನಿರೀಕ್ಷಿಸುತ್ತೇವೆ. ಇದೆಲ್ಲವೂ ಕೋಟ್ಯಂತರ ಭಕ್ತರ ನಂಬಿಕೆಗೆ ಸಂಬಂಧಿಸಿದ ವಿಷಯವಾಗಿದೆ. ಲಡ್ಡು ತಯಾರಿಕೆಯಲ್ಲಿ ಕಲುಷಿತ ತುಪ್ಪವನ್ನು ಬಳಸಿದ್ದರೆ ಅದು ಸ್ವೀಕಾರಾರ್ಹವಲ್ಲ ಎಂದಿತು. ಬಳಿಕ ಪೀಠವು ಮುಂದಿನ ವಿಚಾರಣೆಯನ್ನು ಅಕ್ಟೋಬರ್ 3 ಕ್ಕೆ ಮುಂದೂಡಿತು.

ಆರೋಪವೇನು?:ಮಾಜಿ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರದಲ್ಲಿ ತಿರುಪತಿ ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬು ಮಿಶ್ರಿತ ತುಪ್ಪವನ್ನು ಬಳಸಲಾಗಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಆರೋಪ ಮಾಡಿದ್ದರು. ಇದು ದೇಶಾದ್ಯಂತ ಸಂಚಲನ ಉಂಟು ಮಾಡಿದೆ. ಬಳಿಕ ದೇವಸ್ಥಾನವನ್ನು ಶುದ್ಧೀಕರಣ ಮಾಡಿ, ಕರ್ನಾಟಕದ ಶುದ್ಧ ನಂದಿನಿ ತುಪ್ಪವನ್ನು ಲಡ್ಡು ತಯಾರಿಸಲು ಬಳಕೆಗೆ ಸರ್ಕಾರ ಆದೇಶ ನೀಡಿತ್ತು.

ಸಿಎಂ ನಾಯ್ಡು ಅವರ ಆರೋಪವನ್ನು ವೈಎಸ್ಆರ್ ಕಾಂಗ್ರೆಸ್ ಪಕ್ಷವು ಟೀಕಿಸಿದೆ. ನಾಯ್ಡು ಅವರು ರಾಜಕೀಯ ಲಾಭಕ್ಕಾಗಿ ಇಂತಹ ಕೀಳುಮಟ್ಟದ ಆರೋಪ ಮಾಡಿದ್ದಾರೆ ಎಂದು ಆರೋಪಿಸಿದೆ.

ಇದನ್ನೂ ಓದಿ:ತಿರುಪತಿ ಲಡ್ಡು ಪ್ರಸಾದ ತಯಾರಿ ಹೇಗೆ ಮಾಡ್ತಾರೆ, ಇದಕ್ಕೆ ಬಳಸುವ ಉತ್ಪನ್ನಗಳು ಯಾವುವು ಗೊತ್ತೆ? - laddu prasad tirupati

ABOUT THE AUTHOR

...view details