ಕಡಪ (ಆಂಧ್ರಪ್ರದೇಶ): ರಾಜಕೀಯ ನಾಯಕರು ಕರ್ತವ್ಯದ ವೇಳೆ ಅಧಿಕಾರಿಗಳ ಮೇಲೆ ಹಲ್ಲೆ ಮತ್ತು ಇತರೆ ಅಡ್ಡಿ ಉಂಟು ಮಾಡಿದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಎಚ್ಚರಿಕೆ ನೀಡಿದ್ದಾರೆ.
ದಲಿತ ಸರ್ಕಾರಿ ಅಧಿಕಾರಿ ವಿರುದ್ಧ ಸ್ಥಳೀಯ ವೈಎಸ್‌ಆರ್‌ಸಿಪಿ ನಾಯಕ ಸಿ ಸುದರ್ಶನ್ ರೆಡ್ಡಿ ದಾಳಿ ನಡೆಸಿದ್ದಾರೆ ಎಂಬ ಆರೋಪದ ಬೆನ್ನಲ್ಲೇ ಈ ರೀತಿಯ ಎಚ್ಚರಿಕೆ ನೀಡಲಾಗಿದೆ. ರಾಜಕೀಯ ನಾಯಕರು ನೀವೇನಾದರೂ ಆಕ್ರೋಶದಿಂದ ಅಧಿಕಾರಿಗಳ ಮೇಲೆ ದರ್ಪ ತೋರಿಸಿದರೆ, ಕಠಿಣ ಶಿಕ್ಷೆಯನ್ನು ಪಡೆಯುತ್ತೀರ ಎಂದು ಪವನ್ ಕಲ್ಯಾಣ್ ಕಡಪ ರಿಮ್ಸ್ ಆಸ್ಪತ್ರೆಯ ಹೊರಗೆ ಮಾತನಾಡಿ ಈ ಎಚ್ಚರಿಕೆ ರವಾನಿಸಿದರು.
ಸುದರ್ಶನ್ ರೆಡ್ಡಿ ಮತ್ತು ಅವರ ಜೊತೆ ಅನೇಕ ನಾಯಕರು ಗಾಲಿವೇಡಿ ಮಂಡಲ ಪರಿಷತ್ ಅಭಿವೃದ್ಧಿ ಅಧಿಕಾರಿ ಜವಾಹರ್ ಬಾಬು ಮೇಲೆ ದಾಳಿ ನಡೆಸಿದ್ದರು. ಕಚೇರಿ ಕೊಠಡಿಯ ಕೀ ನೀಡಲು ಹಿಂದೇಟು ಹಾಕಿದ್ದರು. ಇದರ ಜೊತೆಗೆ ಬಾಬು ಅವರನ್ನು ರೂಮ್ನಲ್ಲಿ ಕೂಡಿಹಾಕಿದ್ದಲ್ಲದೆ ಅವರನ್ನು ತಳ್ಳಿದ್ದರು. ಜಾತಿ ನಿಂದನೆ ಮಾಡಲಾಗಿದ್ದು, ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಡಿಸಿಎಂ ಆರೋಪಿಸಿದರು.
ಸುದರ್ಶನ್ ರೆಡ್ಡಿ ಈ ಹಿಮದೆ ಕೂಡ ಅಧಿಕಾರಿಗಳ ಮೇಲೆ ದಾಳಿ ನಡೆಸಿರುವ ಇತಿಹಾಸ ಹಿಂದಿದ್ದು, ಶೇಖರ್ ನಾಯ್ಕ್, ಪ್ರತಾಪ್ ಮತ್ತು ಶ್ರೀವಾಸ್ ರೆಡ್ಡಿ ಮೇಲೆ ಗುರಿಯಾಗಿಸಿ ಈ ಹಿಂದೆ ದಾಳಿ ನಡೆಸಿದ್ದರು.
ಇದೇ ವೇಳೆ ವೈಎಸ್‌ಆರ್‌ಸಿಪಿ ವಿರುದ್ಧ ವಾಗ್ದಾಳಿ ನಡೆಸಿದ ಪವನ್ ಕಲ್ಯಾಣ್, ವಿಧಾನಸಭೆ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ ಪಕ್ಷವನ್ನು 11 ಸ್ಥಾನಗಳಿಗೆ ಇಳಿಸಿದರೂ ಆ ಪಕ್ಷದ ನಾಯಕರ ಅಹಂಕಾರ ಕಡಿಮೆಯಾಗಿಲ್ಲ ಎಂದು ಟೀಕಿಸಿದರು. ಅಲ್ಲದೆ, ವೈಎಸ್ ಜಗನ್ ಮೋಹನ್ ರೆಡ್ಡಿ ಅವರು, ತಮ್ಮ ಪಕ್ಷದ ನಾಯಕರನ್ನು ಹಿಡಿತದಲ್ಲಿಟ್ಟುಕೊಳ್ಳುವಂತೆ ಒತ್ತಾಯಿಸಿದರು.
ಸರ್ಕಾರಿ ಅಧಿಕಾರಿಗಳ ಮೇಲೆ ವೈಎಸ್‌ಆರ್‌ಸಿಪಿ ನಾಯಕರು ಮತ್ತು ಇತರೆ ಸಾರ್ವಜನಿಕ ವ್ಯಕ್ತಿಗಳು ಹಲ್ಲೆ ನಡೆಸಿದರೆ ಅದನ್ನು ಸಹಿಸಲು ಸಾಧ್ಯವಿಲ್ಲ ಎಂದ ಡಿಸಿಎಂ ಪವನ್ ಕಲ್ಯಾಣ, ಈ ರೀತಿ ಘಟನೆ ಮರುಕಳಿಸದಂತೆ ನೋಡಿಕೊಳ್ಳುವಂತೆ ಎಲ್ಲಾ ಅಧಿಕಾರಿಗಳಿಗೂ ಸೂಚನೆ ನೀಡಿದರು.
ಇದನ್ನೂ ಓದಿ: ಅಜ್ಮೀರ್ ಉರುಸ್ಗಾಗಿ ಅಟ್ಟಾರಿ ಗಡಿ ಮೂಲಕ ಭಾರತಕ್ಕೆ ಕಾಲಿಡಲಿರುವ ಪಾಕ್ ಯಾತ್ರಿಕರ ತಂಡ: ಗುಪ್ತಚರ ಇಲಾಖೆ ಹದ್ದಿನ ಕಣ್ಣು