ಕೊಟ್‌ಪುಟ್ಲಿ: ಕಿರಾತ್ಪುರದ ಧಣಿಯಲ್ಲಿ ಹೊಸದಾಗಿ ಕೊರೆದಿದ್ದ ಬೋರ್‌ವೆಲ್‌ಗೆ ಸೋಮವಾರ ಮಧ್ಯಾಹ್ನ ಬಿದ್ದ ಮೂರು ವರ್ಷದ ಬಾಲಕಿಯ ರಕ್ಷಣಾ ಕಾರ್ಯಾಚರಣೆ ಆರನೇ ದಿನವಾದ ಶನಿವಾರವೂ ಮುಂದುವರೆದಿದೆ. ಈ ನಡುವೆ ಬಾಲಕಿ ಚೇತನಾ ಕುಟುಂಬದ ತಾಳ್ಮೆ ಕಟ್ಟೆಯೊಡೆದಿದ್ದು, ಜಿಲ್ಲಾಡಳಿತದ ವಿರುದ್ಧ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಚೇತನಾಳ ತಾಯಿ ಧೋಳಿದೇವಿ ಮಾಧ್ಯಮಗಳ ಜೊತೆಗೆ ಮಾತನಾಡಿ, "‘ಕಲೆಕ್ಟರ್ ಮೇಡಂ ಅವರ ಮಗಳಾಗಿರುತ್ತಿದ್ದರೆ ಇಷ್ಟು ದಿನ ಅಲ್ಲೇ ಇರಲು ಬಿಡುತ್ತಿದ್ದರೇ? ನನ್ನ ಮಗಳು ಹಸಿವು ಮತ್ತು ಬಾಯಾರಿಕೆಯಿಂದ ಬಳಲುತ್ತಿರಬಹುದು. ನನ್ನ ಮಾತು ಕೇಳದಿದ್ದರೂ ಆ ಹುಡುಗಿಯ ಮನಸ್ಸಿನ ಕರೆಗೆ ಕಿವಿಗೊಡಿ. ನನ್ನ ಮಗಳನ್ನು ಆದಷ್ಟು ಬೇಗ ಹೊರಗೆ ಕರೆದುಕೊಂಡು ಬನ್ನಿ" ಎಂದು ಮನವಿ ಮಾಡಿದರು.
ಸೋಮವಾರ ಆಟವಾಡುತ್ತಿದ್ದಾಗ ಕೊಟ್‌ಪುಟ್ಲಿಯಲ್ಲಿ 700 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದ 3 ವರ್ಷದ ಚೇತನಾಳನ್ನು 116 ಗಂಟೆ ಕಳೆದರೂ ಹೊರ ತೆಗೆಯುವಲ್ಲಿ ಆಡಳಿತ ಮಂಡಳಿ ಯಶಸ್ವಿಯಾಗಿಲ್ಲ. ಬೋರ್ ವೆಲ್ ಪಕ್ಕದಲ್ಲಿ 170 ಅಡಿ ಗುಂಡಿ ತೋಡಲಾಗಿದೆ. ಅಗೆದು ಕೇಸಿಂಗ್ ಅಳವಡಿಸುವ ಕೆಲಸವೂ ಮುಗಿದಿದೆ. ಒಳಗೆ 90 ಡಿಗ್ರಿಯಲ್ಲಿ ಸುಮಾರು 10 ಅಡಿ ಸುರಂಗವನ್ನು ಮಾಡಲು ಎನ್‌ಡಿಆರ್‌ಎಫ್ ತಂಡ ಸುರಕ್ಷತಾ ಸಾಧನಗಳೊಂದಿಗೆ ಗುಂಡಿಗೆ ಇಳಿದು, ರಕ್ಷಣಾ ಕಾರ್ಯ ನಡೆಸಿದೆ.
ಪಿಟ್ನಲ್ಲಿ ಆಮ್ಲಜನಕದ ಮಟ್ಟವನ್ನು ಅಳೆಯಲಾಗುತ್ತಿದೆ. 20 ನಿಮಿಷಗಳಿಗೊಮ್ಮೆ ಗುಂಡಿಗೆ ತೆರಳಿ, ಭೌಗೋಳಿಕ ಪರಿಸ್ಥಿತಿ ಮತ್ತು ಪರಿಸರದ ಬಗ್ಗೆ ಮಾಹಿತಿ ತೆಗೆದುಕೊಳ್ಳಲಾಗುತ್ತಿದೆ. ಗುಂಡಿಯೊಳಗೆ ಎನ್‌ಡಿಆರ್‌ಎಫ್ ತಂಡಕ್ಕೆ ಫ್ಯಾನ್, ಲೈಟ್, ಆಕ್ಸಿಜನ್, ಕಟ್ಟರ್ ಮಷಿನ್ ಸೇರಿದಂತೆ ಎಲ್ಲ ಸಲಕರಣೆಗಳು ಲಭ್ಯವಾಗುವಂತೆ ಮಾಡಲಾಗಿದೆ. ಎಲ್ - ಬ್ಯಾಂಡ್ ಸುರಂಗವನ್ನು ಶೀಘ್ರದಲ್ಲೇ ಕೊರೆಯಲಾಗುವುದು. ಆದರೆ, ಮಳೆಯಾಗುವ ಸಾಧ್ಯತೆಯ ಬಗ್ಗೆ ಆಡಳಿತ ಮಂಡಳಿ ಆತಂಕ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಬೋರ್‌ವೆಲ್ ಗೆ ಬಿದ್ದ ಬಾಲಕಿ ರಕ್ಷಣೆಗೆ ಮುಂದುವರಿದ ಕಾರ್ಯಾಚರಣೆ
ಬೋರ್‌ವೆಲ್‌ನಲ್ಲಿ ಸಿಲುಕಿದ್ದ ಐದು ವರ್ಷದ ಬಾಲಕ ಆಸ್ಪತ್ರೆಯಲ್ಲಿ ಸಾವು: ಫಲ ನೀಡಲಿಲ್ಲ 55 ಗಂಟೆಗಳ ಕಾರ್ಯಾಚರಣೆ