ಮೈಸೂರು: ನಗರದ ಯೋಗಾನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಹೊಸ ವರ್ಷಕ್ಕೆ 2 ಲಕ್ಷ ತಿರುಪತಿ ಮಾದರಿಯ ಲಡ್ಡುಗಳನ್ನು ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿ ವರ್ಷ ಹೊಸ ವರ್ಷದಂದು ಉಚಿತವಾಗಿ ಭಕ್ತರಿಗೆ ಲಡ್ಡು ವಿತರಿಸುವ ಕಾರ್ಯವನ್ನು 30 ವರ್ಷಗಳ ಹಿಂದೆಯೇ ಡಾ. ರಾಜ್ಕುಮಾರ್ ಆರಂಭಿಸಿದ್ದರು. ಈಗಲೂ ಆ ಸಂಪ್ರದಾಯ ಮುಂದುವರೆಸಿಕೊಂಡು ಬರಲಾಗಿದೆ ಎಂದು ದೇವಾಲಯದ ಆಡಳಿತಾಧಿಕಾರಿ ಶ್ರೀನಿವಾಸ್ ಈಟಿವಿ ಭಾರತ್ಗೆ ವಿತರಿಸಿದರು.
ಪ್ರತಿ ವರ್ಷ ಜನವರಿ 1ರಂದು, ಮೈಸೂರು ನಗರದ ಯೋಗಾನರಸಿಂಹ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಲಡ್ಡು ವಿತರಣೆ ಕಾರ್ಯಕ್ರಮ ನಡೆಯುತ್ತಿದೆ. ಅದರಂತೆ 2025ರ ಆರಂಭದ ದಿನದಂದು 2 ಲಕ್ಷಕ್ಕೂ ಹೆಚ್ಚಿನ ಲಡ್ಡುಗಳನ್ನು ಭಕ್ತರಿಗೆ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
1994ರಲ್ಲಿ ಡಾ. ರಾಜ್ಕುಮಾರ್ 1,000 ರೂಪಾಯಿ ನೀಡಿ, ಹೊಸ ವರ್ಷದಂದು ಲಡ್ಡು ವಿತರಿಸಲು ತಿಳಿಸಿದ್ದರು. ಇದು ಪ್ರತೀ ವರ್ಷಕ್ಕೂ ಮುಂದುವರಿಯಿತು. 2 ಲಕ್ಷ ಲಡ್ಡುಗಳನ್ನು ಕಳೆದ 30 ವರ್ಷಗಳಿಂದ ವಿತರಿಸುತ್ತಾ ಬರಲಾಗಿದೆ. ಹೊಸ ವರ್ಷದಂದು ಬೆಳಗಿನ ಜಾವ 4 ಗಂಟೆಯಿಂದ ಆರಂಭಿಸಿ ರಾತ್ರಿವರೆಗೆ ನಿರಂತರವಾಗಿ ತಿರುಪತಿ ಮಾದರಿಯ ಲಡ್ಡು ಹಾಗೂ ಪುಳಿಯೋಗರೆ ವಿತರಿಸಲಾಗುತ್ತದೆ. ಲಡ್ಡು ತಯಾರಿಸಲು 100 ಮಂದಿ ಅಡುಗೆ ಭಟ್ಟರು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಲಡ್ಡು ತಯಾರಿಕೆ ಬಗ್ಗೆ ಶ್ರೀನಿವಾಸ್ ವಿವರಿಸಿದರು.
ಈ ಬಾರಿ ತಿರುಪತಿ ಮಾದರಿಯ ಲಡ್ಡು ತಯಾರಿಕೆ ಸಂದರ್ಭ, ದಿ. ಡಾ.ರಾಜ್ಕುಮಾರ್ ಅವರ ಪುತ್ರಿ ಲಕ್ಷ್ಮೀ, ಅಳಿಯ ಗೋವಿಂದರಾಜ್ ಆಗಮಿಸಿದ್ದಾರೆ. ತಂದೆ ಜೊತೆ 30 ವರ್ಷಗಳ ಹಿಂದೆ ದೇವಾಲಯಕ್ಕೆ ಬಂದ ನೆನಪನ್ನು ಅವರು ವಿವರಿಸಿದರು.
ಇದನ್ನೂ ಓದಿ: ಅಮಿತಾಭ್, ಶಾರುಖ್ To ದೀಪಿಕಾ: ನಯಾ ಪೈಸೆ ಪಡೆಯದೇ ನಟಿಸಿದ ಸೂಪರ್ ಸ್ಟಾರ್ಗಳಿವರು
ಜನವರಿ 1ರಂದು ತಿರುಪತಿ ಮಾದರಿಯ ಲಡ್ಡು ಹಾಗೂ ಪುಳಿಯೋಗರೆಯನ್ನು ಭಕ್ತರಿಗೆ ನೀಡಲಾಗುವುದು. ಹಾಗೇ ದೇವರಿಗೆ ವಿಶೇಷ ಅಲಂಕಾರ ಮಾಡಲಾಗುವುದು. ಜಾತಿ ಭೇದವಿಲ್ಲದೇ ಎಲ್ಲಾ ಧರ್ಮಿಯರೀಗೂ ಅಂದು ಉಚಿತವಾಗಿ ಲಡ್ಡು ವಿತರಿಸಲಾಗುವುದು ಎಂದು ಶ್ರೀನಿವಾಸ್ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಇದನ್ನೂ ಓದಿ: ಬ್ರಹ್ಮಗಂಟು ನಟಿ ಶೋಭಿತಾ To ಶ್ಯಾಮ್ ಬೆನಗಲ್: 2024ರಲ್ಲಿ ನಾವು ಕಳೆದುಕೊಂಡ ಭಾರತೀಯ ಸೆಲೆಬ್ರಿಟಿಗಳಿವರು