ಕರ್ನಾಟಕ

karnataka

ETV Bharat / bharat

ಸೆಲೆಬ್ರಿಟಿಗಲ್ಲ, ರಾಜಕಾರಣಿಗಲ್ಲ, ಶಾಲಾ ಮಕ್ಕಳಿಗೆ ಗನ್​ಮ್ಯಾನ್​ ನೀಡಿದ ಸರ್ಕಾರ: ಎಲ್ಲಿ ಗೊತ್ತಾ? - SECURITY FOR SCHOOL CHILDREN

ಅಸ್ಸಾಂನಲ್ಲಿ ಶಾಲಾ ಮಕ್ಕಳಿಗೆ ಅಲ್ಲಿನ ಜಿಲ್ಲಾಡಳಿತವು ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಿದೆ. ಯಾಕೆ ಅಂತೀರಾ? ಮುಂದೆ ಓದಿ.

ಗನ್​ಮ್ಯಾನ್​ ಭದ್ರತೆಯಲ್ಲಿ ಶಾಲೆಗೆ ತೆರಳುತ್ತಿರುವ ಮಕ್ಕಳು
ಗನ್​ಮ್ಯಾನ್​ ಭದ್ರತೆಯಲ್ಲಿ ಶಾಲೆಗೆ ತೆರಳುತ್ತಿರುವ ಮಕ್ಕಳು (ETV Bharat)

By ETV Bharat Karnataka Team

Published : Jan 6, 2025, 8:17 PM IST

ಕಾಲಿಯಾಬರ್ (ಅಸ್ಸಾಂ):ಸೆಲೆಬ್ರಿಟಿಗಳಿಗೆ, ರಾಜಕೀಯ ಗಣ್ಯರಿಗೆ, ಜೀವ ಬೆದರಿಕೆ ಇರುವ ವ್ಯಕ್ತಿಗಳಿಗೆ ಗನ್​​ಮ್ಯಾನ್​ ಅಥವಾ ಅಂಗರಕ್ಷಕರನ್ನು ನಿಯೋಜಿಸುವುದು ಸಹಜ. ಶಾಲಾ ಮಕ್ಕಳಿಗೆ ಭದ್ರತಾ ಸಿಬ್ಬಂದಿ ಅಗತ್ಯವಿದೆಯೇ?. ಈ ಪ್ರಶ್ನೆಯನ್ನು ಅಸ್ಸಾಂನ ಶಾಲಾ ಮಕ್ಕಳಿಗೆ ಕೇಳಿದ್ರೆ 'ಹೌದು' ಎನ್ನುತ್ತಾರೆ ಅವರು.

ಅಸ್ಸಾಂನ ನಾಗಾಂವ್​ ಜಿಲ್ಲಾಡಳಿತವು ತಿಮೋನಾಬಸ್ತಿ ಎಂಬಲ್ಲಿಯ ಶಾಲಾ ಮಕ್ಕಳಿಗೆ ಗನ್​ಮ್ಯಾನ್​ ನಿಯೋಜಿಸಿದೆ. ಆ ಭದ್ರತಾ ಸಿಬ್ಬಂದಿ ದಿನವೂ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬಂದು, ವಾಪಸ್​ ಕರೆದೊಯ್ಯಬೇಕು. ಇದು ಯಾವುದೇ ಕಾರಣಕ್ಕೂ ಮಿಸ್​ ಆಗುವಂತಿಲ್ಲ.

ಸೋಮವಾರವಾದ ಇಂದು ತಿಮೋನಾ ಬಸ್ತಿ ಪ್ರದೇಶದ 25 ಮಕ್ಕಳನ್ನು ಭದ್ರತಾ ಸಿಬ್ಬಂದಿ ಗನ್​​ ಹಿಡಿದುಕೊಂಡು ಶಾಲೆಗೆ ಕರೆದೊಯ್ದಿದ್ದಾನೆ. ಬಳಿಕ ಅವರನ್ನು ತನ್ನ ಕಣ್ಣೋಟದಲ್ಲೇ ಊರಿಗೆ ಸುರಕ್ಷಿತವಾಗಿ ತಂದು ಬಿಟ್ಟಿದ್ದಾನೆ. ಈ ಘಟನೆ ಸದ್ಯ ಸಂಚಲನಕ್ಕೆ ಕಾರಣವಾಗಿದೆ.

ಬಿಗಿಭದ್ರತೆಗೆ ಕಾರಣ ಇದು:ಶಾಲಾ ಮಕ್ಕಳಿಗೆ ಗನ್​ಮ್ಯಾನ್​ ಭದ್ರತೆ ನೀಡಲು ಕಾರಣ ಬೆಂಗಾಲ್​ ಟೈಗರ್​​. ತಿಮೋನಾಬಸ್ತಿ ಪ್ರದೇಶವು ಕಾಡಿಗೆ ಹೊಂದಿಕೊಂಡಿರುವ ಕಾರಣ, ಕಳೆದ ಕೆಲವು ದಿನಗಳಿಂದ ಹುಲಿಯೊಂದು ಈ ಪ್ರದೇಶದಲ್ಲಿ ತಿರುಗಾಡುತ್ತಿದೆ. ದಾಳಿ ಮಾಡುವ ಭೀತಿಯಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರಲಿಲ್ಲ. ಇದನ್ನು ಮನಗಂಡ ಜಿಲ್ಲಾಡಳಿತ ಶಾಲಾ ಮಕ್ಕಳಿಗೆ ಭದ್ರತಾ ಸಿಬ್ಬಂದಿ ವ್ಯವಸ್ಥೆ ಮಾಡಿದೆ.

ಅಸ್ಸಾಂ ಸರ್ಕಾರವು ಎಲ್ಲ ಸರ್ಕಾರ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ನಿರ್ಣಯಿಸಲು ಸೋಮವಾರದಿಂದ 'ಗುಣೋತ್ಸವ' ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಇದರಿಂದ ಶಾಲೆಯಲ್ಲಿ ಮಕ್ಕಳ ಹಾಜರಾತಿ ಕಡ್ಡಾಯವಾಗಿದೆ. ತಿಮೋನಾ ಬಸ್ತಿಯಲ್ಲಿ ಹುಲಿ ಭಯದಿಂದ ಮಕ್ಕಳು ಶಾಲೆಗೆ ಗೈರಾಗುತ್ತಿದ್ದರು. ಮಕ್ಕಳನ್ನು ಶಾಲೆಗೆ ಕರೆತರುವುದು ಅನಿವಾರ್ಯವಾಗಿರುವ ಕಾರಣ, ಸರ್ಕಾರವೇ ಈ ಪ್ಲಾನ್​ ಮಾಡಿದೆ.

ಮಕ್ಕಳ ಸುರಕ್ಷತೆಗಾಗಿ ಕ್ರಮ:ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಲೋನಾ ಅರಣ್ಯ ಪ್ರದೇಶದ ರೇಂಜರ್ ಬಿಭೂತಿ ಮಜುಂದಾರ್ ಅವರು, "ತಿಮೋನಾ ಬಸ್ತಿ ಗ್ರಾಮವು ಕಾಮಾಖ್ಯ ಮೀಸಲು ಅರಣ್ಯಕ್ಕೆ ಸಮೀಪದಲ್ಲಿದೆ. ಇಲ್ಲಿ ಚಹಾ ತೋಟಗಳಿವೆ. ಕೆಲವೊಮ್ಮೆ ಹುಲಿಗಳು ತಮ್ಮ ಕಾರಿಡಾರ್‌ ದಾಟಿ ಗ್ರಾಮಗಳತ್ತ ಬರುತ್ತವೆ. ಕೆಲವು ದಿನಗಳಿಂದ ರಾಯಲ್ ಬೆಂಗಾಲ್ ಟೈಗರ್ ಕಾಡಿನಿಂದ ತಪ್ಪಿಸಿಕೊಂಡು ನಾಡಿಗೆ ಬಂದಿದೆ. ಸ್ಥಳೀಯರು ಅದನ್ನು ಕಂಡಿದ್ದು, ಪ್ರಾಣ ಭೀತಿಯಲ್ಲಿದ್ದಾರೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಮಕ್ಕಳಿಗೆ ಭದ್ರತೆ ಒದಗಿಸಲಾಗಿದೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ:ಅರವಿಂದ್​ ಕೇಜ್ರಿವಾಲ್​ ಬಂಗಲೆಗೆ ಖರ್ಚಾಗಿದ್ದು ₹33 ಕೋಟಿಯಲ್ಲ, ₹80 ಕೋಟಿ: ಬಿಜೆಪಿ ಆರೋಪ

ABOUT THE AUTHOR

...view details