ಬಾಲಾಘಾಟ್: ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯ ಖೈರ್ಲಾಂಜಿ ಸಿಲಾರಿ ಗ್ರಾಮದಲ್ಲಿ ಭಾನುವಾರ ರೈತನೊಬ್ಬನನ್ನು ಹುಲಿಯೊಂದು ಕೊಂದು ತಿಂದಿರುವ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಬುಡಕಟ್ಟು ಜನಾಂಗದ ರೈತನನ್ನು ಹುಲಿ ಬೇಟೆಯಾಡಿ, ಆತನ ದೇಹದ ಅರ್ಧದಷ್ಟು ಭಾಗವನ್ನು ತಿಂದಿದೆ. ಶವ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಹೊಲಕ್ಕೆ ಹೋದವ ಮರಳಿ ಬರಲಿಲ್ಲ: ರೈತ ಸುಖರಾಮ್ ಉಯ್ಕೆ (55) ಎಂಬವರೇ ಹುಲಿಗೆ ಬಲಿಯಾದ ರೈತ. ದನಗಳನ್ನು ಮೇಯಿಸಲು ಜೊತೆಗೆ ಕರೆದೊಯ್ದಿದ್ದ ರೈತ, ಉಳುಮೆ ಮಾಡುವ ಕಾರ್ಯದಲ್ಲಿ ತೊಡಗಿದ್ದರು. ಆದರೆ ದನಗಳು ಮಾತ್ರ ಮನೆಗೆ ಮರಳಿದ್ದವು. ಇದರಿಂದ ಅನುಮಾನಗೊಂಡ ಕುಟುಂಬಸ್ಥರು ಗ್ರಾಮಸ್ಥರೊಂದಿಗೆ ಸೇರಿ ಸುಖರಾಮ್ಗಾಗಿ ಹುಡುಕಾಟ ನಡೆಸಿದ್ದಾರೆ.
ಸುಖರಾಮ್ ಮೃತ ದೇಹ ತಿನ್ನುತ್ತಿದ್ದ ಹುಲಿ:ಗ್ರಾಮಸ್ಥರು ಹಾಗೂ ಪಕ್ಕದ ಊರಿನವರೆಲ್ಲ ಸೇರಿಕೊಂಡು ಮಧ್ಯಾಹ್ನದ ವೇಳೆಗೆ ಹೊಲಗಳಿಗೆ ಹೋಗಿ ಹುಡುಕಾಡಿದ್ದಾರೆ. ಅಲ್ಲಿ ಸುಖರಾಮ್ ಅವರ ಚಪ್ಪಲಿ ಮತ್ತು ಟವೆಲ್ ಬಿದ್ದಿರುವುದು ಕಂಡು ಬಂದಿದೆ. ಸಮೀಪದ ಪೊದೆಗಳಲ್ಲಿ ಎಳೆದೊಯ್ದಿರುವ ಗುರುತುಗಳು ಕಾಣಿಸಿದ್ದು, ಹುಲಿಯೊಂದು ಸಮೀಪದ ಕಬ್ಬಿನ ಗದ್ದೆಯಲ್ಲಿ ಸುಖರಾಮ್ ಮೃತದೇಹವನ್ನು ಭಕ್ಷಿಸುತ್ತಿರುವುದನ್ನು ಕಂಡಿದ್ದಾರೆ. ಗ್ರಾಮಸ್ಥರನ್ನು ಕಂಡೊಡನೆ ಎಚ್ಚೆತ್ತುಕೊಂಡ ಹುಲಿ ಸ್ಥಳದಿಂದ ಓಡಿ ಹೋಗಿದೆ. ಈ ದೃಶ್ಯವನ್ನು ಕಂಡ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಸುಖರಾಮ್ ಅವರ ತಲೆ ಮತ್ತು ಕುತ್ತಿಗೆಯ ಮೇಲೆ ತೀವ್ರ ಗಾಯಗಳಾಗಿತ್ತು. ಅಲ್ಲದೇ, ಅವರ ಸೊಂಟದ ಕೆಳಗಿನ ಭಾಗವನ್ನು ಹುಲಿಯು ತಿಂದು ಮುಗಿಸಿತ್ತು. ಮೃತದೇಹ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.