ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ, ನೌಕರರ ಪಿಂಚಣಿ ಯೋಜನೆ (ಇಪಿಎಸ್) ಗಾಗಿ ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆ (ಸಿಪಿಪಿಎಸ್) ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ವ್ಯವಸ್ಥೆಯ ಮೂಲಕ ಪಿಂಚಣಿದಾರರು 2025 ರ ಜನವರಿ 1 ರಿಂದ ಭಾರತದ ಯಾವುದೇ ಬ್ಯಾಂಕಿನಿಂದ ಪಿಂಚಣಿ ಪಡೆಯಲು ಸಾಧ್ಯವಾಗಲಿದೆ.
ರಾಷ್ಟ್ರೀಯ ಮಟ್ಟದ ಕೇಂದ್ರೀಕೃತ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿರುವುದು ಸಿಪಿಪಿಎಸ್ನಲ್ಲಿ ಮಹತ್ವದ ಬದಲಾವಣೆಯಾಗಿದೆ. ಇದರಿಂದ ಭಾರತದಾದ್ಯಂತದ ಯಾವುದೇ ಬ್ಯಾಂಕ್, ಯಾವುದೇ ಶಾಖೆಯ ಮೂಲಕ ಪಿಂಚಣಿ ಪಡೆಯಲು ಸಾಧ್ಯವಾಗಲಿದೆ ಎಂದು ಸರ್ಕಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಕಾರ್ಮಿಕ ಸಚಿವ ಡಾ.ಮನ್ಸುಖ್ ಮಾಂಡವಿಯಾ, "ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆ (ಸಿಪಿಪಿಎಸ್) ಅನುಮೋದನೆಯು ಇಪಿಎಫ್ಒ ಆಧುನೀಕರಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಪಿಂಚಣಿದಾರರು ಇನ್ನು ಮುಂದೆ ತಮ್ಮ ಪಿಂಚಣಿಯನ್ನು ದೇಶದ ಯಾವುದೇ ಭಾಗದಲ್ಲಿನ ಯಾವುದೇ ಬ್ಯಾಂಕ್, ಯಾವುದೇ ಶಾಖೆಯಿಂದ ಪಡೆಯಬಹುದಾಗಿದೆ. ಹೊಸ ವ್ಯವಸ್ಥೆಯು ಪಿಂಚಣಿದಾರರು ಎದುರಿಸುತ್ತಿರುವ ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸಲಿದೆ ಮತ್ತು ತಡೆರಹಿತ ಹಾಗೂ ಪರಿಣಾಮಕಾರಿ ಪಿಂಚಣಿ ವಿತರಣೆಗೆ ಅನುವು ಮಾಡಿಕೊಡಲಿದೆ. ಇಪಿಎಫ್ಒ ಅನ್ನು ಹೆಚ್ಚು ದೃಢವಾದ, ಸ್ಪಂದಿಸುವ ಮತ್ತು ತಂತ್ರಜ್ಞಾನ - ಶಕ್ತ ಸಂಸ್ಥೆಯಾಗಿ ಪರಿವರ್ತಿಸುವ ನಮ್ಮ ನಿರಂತರ ಪ್ರಯತ್ನಗಳಲ್ಲಿ ಇದು ನಿರ್ಣಾಯಕ ಹೆಜ್ಜೆಯಾಗಿದೆ." ಎಂದು ಹೇಳಿದರು.