ಪುಣೆ (ಮಹಾರಾಷ್ಟ್ರ): "ಕೇರಳ 'ಮಿನಿ ಪಾಕಿಸ್ತಾನ' ಇದ್ದಂತೆ. ಹೀಗಾಗಿ, ಕಾಂಗ್ರೆಸ್ನ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಗೆಲುವು ಸಾಧಿಸಿದರು. ಅವರಿಗೆ ಭಯೋತ್ಪಾದಕ ಸಂಘಟನೆಗಳು ಬೆಂಬಲ ನೀಡಿದ್ದವು" ಎಂದು ಮಹಾರಾಷ್ಟ್ರದ ಸಚಿವ ನಿತೇಶ್ ರಾಣೆ ಸೋಮವಾರ ಆರೋಪಿಸಿದ್ದಾರೆ. ಇದೀಗ, ಈ ಹೇಳಿಕೆ ವಿವಾದದ ಕಿಡಿ ಹೊತ್ತಿಸಿದೆ.
ಪುಣೆ ಜಿಲ್ಲೆಯ ಪುರಂದರ ತಾಲೂಕಿನಲ್ಲಿ ನಡೆದ ಅಫ್ಜಲ್ಖಾನ್ ವಿರುದ್ಧ ಛತ್ರಪತಿ ಶಿವಾಜಿಯ ಐತಿಹಾಸಿಕ ಗೆಲುವಿನ ಸಂಭ್ರಮದ ವರ್ಷಾಚರಣೆ ಕಾರ್ಯಕ್ರಮದಲ್ಲಿ ರಾಣೆ ಅವರು ಮಾತನಾಡಿದ್ದು, "ಕೇರಳವು ಮಿನಿ ಪಾಕಿಸ್ತಾನವಾಗಿದೆ. ಎಲ್ಲ ಭಯೋತ್ಪಾದಕರು ಕಾಂಗ್ರೆಸ್ ಪರ ಮತ ಚಲಾಯಿಸಿದ್ದಾರೆ. ಹೀಗಾಗಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಗೆಲುವು ಸಾಧಿಸಿದರು. ಇವರೆಲ್ಲಾ ಭಯೋತ್ಪಾದಕರ ಬೆಂಬಲದಿಂದ ಸಂಸದರಾಗಿದ್ದಾರೆ" ಎಂದು ದೂರಿದರು.
" kerala is a mini pakistan"
— Mahesh Vikram Hegde 🇮🇳 (@mvmeet) December 30, 2024
"that's why rahul gandhi & priyanka gandhi won elections there"
"terrorists vote for them, to become members of parliament"!!
- maharashtra state minister nitesh rane pic.twitter.com/JgWW6ncmmo
ಕಾಂಗ್ರೆಸ್ ವಿರೋಧ: ಸಚಿವ ರಾಣೆ ನೀಡಿದ ಹೇಳಿಕೆಯು ವಿವಾದ ಸ್ವರೂಪ ಪಡೆದುಕೊಂಡಿದೆ. ಇದನ್ನು ಕಾಂಗ್ರೆಸ್ ಖಂಡಿಸಿದ್ದು, ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ಕೇರಳದಲ್ಲಿ ಸ್ಪರ್ಧೆ ಮಾಡುತ್ತದೆಯೋ ಇಲ್ಲವೋ ಎಂಬುದನ್ನು ಆ ಪಕ್ಷವು ದೃಢಪಡಿಸಬೇಕು. ದೇಶದ ಭಾಗವಾಗಿರುವ ರಾಜ್ಯವನ್ನು ಮಿನಿ ಪಾಕಿಸ್ತಾನಕ್ಕೆ ಹೋಲಿಸಿದ್ದು ನಾಯಕರ ಉದ್ಧಟತನ ಎಂದು ಕಿಡಿಕಾರಿದೆ.
ಬಿಜೆಪಿ ನಾಯಕನ ಬಾಯಿಂದ ಇಂಥ ಹೇಳಿಕೆಗಳು ಆಗಾಗ್ಗೆ ಬರುತ್ತಿರುತ್ತವೆ. ಈ ಬಗ್ಗೆ ಸಿಎಂ ದೇವೇಂದ್ರ ಫಡ್ನವೀಸ್ ಅವರು ಗಮನಿಸಬೇಕು ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಹೇಳಿಕೆಗೆ ಸಚಿವ ಸ್ಪಷ್ಟನೆ: ತಮ್ಮ ಹೇಳಿಕೆ ವಿವಾದಕ್ಕೆ ಎಡೆ ಮಾಡಿಕೊಟ್ಟ ಬಳಿಕ ಸ್ಪಷ್ಟನೆ ನೀಡಿರುವ ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ, ಕೇರಳವು ಅಖಂಡ ಭಾರತದ ಭಾಗವಾಗಿದೆ. ಪಾಕಿಸ್ತಾನ ಮತ್ತು ಆ ರಾಜ್ಯದಲ್ಲಿನ ಪರಿಸ್ಥಿತಿಯನ್ನು ಹೋಲಿಸಿ ಹೇಳಿಕೆ ನೀಡಿದ್ದೆ ಎಂದಿದ್ದಾರೆ.
ಕೇರಳದಲ್ಲಿ ಹಿಂದುಗಳ ಸಂಖ್ಯೆ ಕ್ಷೀಣಿಸುತ್ತಿರುವುದು ಕಳವಳದ ಸಂಗತಿ. ನಮ್ಮವರನ್ನು ಇಸ್ಲಾಂ ಮತ್ತು ಕ್ರಿಶ್ಚಿಯನ್ಗೆ ಮತಾಂತರ ಮಾಡಲಾಗುತ್ತಿದೆ. ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗಿವೆ. ಇದೆಲ್ಲವೂ ಪಾಕಿಸ್ತಾನದ ಮಾದರಿಯಲ್ಲಿ ನಡೆಯುತ್ತಿದೆ. ಇದರ ವಿರುದ್ಧ ಕ್ರಮ ಜರುಗಿಸಬೇಕು ಎಂದು ನನ್ನ ಭಾಷಣದಲ್ಲಿ ಹೇಳಿದ್ದೆ ಎಂದು ರಾಣೆ ಸ್ಪಷ್ಟೀಕರಣ ನೀಡಿದ್ದಾರೆ.
ಇದನ್ನೂ ಓದಿ: ಡಾ.ಸಿಂಗ್ ಸಾವಿನ ಶೋಕದಲ್ಲೂ ಹೊಸ ವರ್ಷಾಚರಣೆಗೆ ರಾಹುಲ್ ಗಾಂಧಿ ವಿಯಟ್ನಾಮ್ಗೆ ತೆರಳಿದ್ದಾರೆ: ಬಿಜೆಪಿ ಆರೋಪ