ನವದೆಹಲಿ:ಮಧ್ಯ ಪ್ರದೇಶದ ಬಂಧವ್‌ಗಢ್ ಹುಲಿ ಮೀಸಲು ಅರಣ್ಯ ಪ್ರದೇಶದಲ್ಲಿ ಒಂದೇ ವಾರದಲ್ಲಿ 10 ಆನೆಗಳು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದು, ರಾಜ್ಯ ಹಾಗು ಕೇಂದ್ರ ಸರ್ಕಾರ ತನಿಖೆಗೆ ಕ್ರಮ ಕೈಗೊಂಡಿದೆ.
ನಾಲ್ಕು ಆನೆಗಳು ಬಂಧವ್‌ಗಢ್ ಹುಲಿ ರಕ್ಷಿತಾರಣ್ಯದ ಕಿತೋಲಿ ವಲಯದ ಸಂಖನಿ ಮತ್ತು ಬಕೇಲಿ ಎಂಬಲ್ಲಿ ಅಕ್ಟೋಬರ್ 29ರಂದು ಸಾವನ್ನಪ್ಪಿದರೆ, ಇನ್ನುಳಿದ ನಾಲ್ಕು ಆನೆಗಳು ಅಕ್ಟೋಬರ್ 30ರಂದು ಹಾಗು ಉಳಿದ 2 ಆನೆಗಳು ಮರುದಿನ ಅಸುನೀಗಿವೆ.
ಆನೆಗಳಿಗೆ ವಿಷಪ್ರಾಶನ?:ಮಧ್ಯ ಪ್ರದೇಶ ಅರಣ್ಯ ಇಲಾಖೆ ಅಧಿಕಾರಿಗಳ ಪ್ರಾಥಮಿಕ ವರದಿಗಳು, ವಿಷ ಪ್ರಾಶನದಿಂದ ಆನೆಗಳು ಸಾವನ್ನಪ್ಪಿರುವ ಸಾಧ್ಯತೆಯ ಕುರಿತು ತಿಳಿಸಿವೆ.
ವನ್ಯಜೀವಿಗಳ ಮೇಲಿನ ಅಪರಾಧಗಳ ನಿಯಂತ್ರಣ ಬ್ಯೂರೋ (WCCB) ತನಿಖೆಗೆ ತಂಡ ರಚಿಸಿದೆ ಎಂದು ಕೇಂದ್ರ ಪರಿಸರ ಸಚಿವಾಲಯ ತನ್ನ ಹೇಳಿಕೆ ಬಿಡುಗಡೆ ಮಾಡಿದೆ.
ಮಧ್ಯ ಪ್ರದೇಶ ಸರ್ಕಾರ ಕೂಡಾ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ ವಿಭಾಗ) ಇವರ ನೇತೃತ್ವದಲ್ಲಿ ಐವರ ಸಮಿತಿ ರಚಿಸಿ ಘಟನೆಗೆ ಕಾರಣ ತಿಳಿಯಲು ನಿರ್ಧರಿಸಿದೆ.
ಇದರ ನಡುವೆ ರಾಜ್ಯ ಟೈಗರ್ ಸ್ಟೈಕ್ ಫೋರ್ಸ್ (STSF) ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಮಾಡುತ್ತಿದೆ. ಆನೆಗಳು ಸಾವನ್ನಪ್ಪಿದ ಅರಣ್ಯ ಪ್ರದೇಶ ಮತ್ತು ಸಮೀಪದ ಗ್ರಾಮಗಳಲ್ಲಿ ಎಸ್‌ಟಿಎಸ್ಎಫ್ ಮಾಹಿತಿ ಸಂಗ್ರಹಿಸುತ್ತಿದೆ ಎಂದು ಹೇಳಿಕೆಯಲ್ಲಿ ಮಾಹಿತಿ ನೀಡಿದೆ.
ರಾಜ್ಯ ವನ್ಯಜೀವಿ ಅಧಿಕಾರಿಗಳ ಪ್ರಕಾರ, ವಿಸ್ತೃತ ಮರಣೋತ್ತರ ವರದಿ, ಪೂರಕ ಸಾಕ್ಷ್ಯಾಧಾರಗಳಿಂದ ಕೂಡಿದ ಆಳವಾದ ತನಿಖೆಯ ನಂತರವಷ್ಟೇ ಆನೆಗಳ ಸಾವಿಗೆ ನಿಖರ ಕಾರಣ ತಿಳಿಯಲಿದೆ.
ಇಂಥ ಘಟನೆಗಳು ಮರುಕಳುಹಿಸುವುದನ್ನು ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮವಾಗಿ ಬಂಧವ್‌ಗಢ್ ಹುಲಿ ರಕ್ಷಿತಾರಣ್ಯದ ಸುತ್ತಮುತ್ತಲ ಪ್ರದೇಶಗಳಲ್ಲಿ ಆನೆಗಳ ಹಿಂಡಿನ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ತೀವ್ರ ನಿಗಾ ಇಟ್ಟಿದ್ದಾರೆ.
ಇದನ್ನೂ ಓದಿ:ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿಬಿದ್ದ ಕಾರು: 6 ಮಂದಿ ಪ್ರಯಾಣಿಕರು ಸಾವು