ಹೈದರಾಬಾದ್: ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ಡ್ರಗ್ಸ್ ಹಾವಳಿ ಅಧಿಕವಾಗಿದೆ. ಕಳ್ಳಸಾಗಣೆದಾರರು ಸಹ ಹೆಚ್ಚು ಸಕ್ರಿಯವಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ವೇದಿಕೆಯಾಗಿಟ್ಟುಕೊಂಡು ಅವ್ಯಾಹತವಾಗಿ ಡ್ರಗ್ಸ್ ವಹಿವಾಟು ನಡೆಸಲಾಗುತ್ತಿದೆ. ಈ ಮಾದಕ ವ್ಯಸನ ನಿರ್ಮೂಲನೆ ಮಾಡಲು ತೆಲಂಗಾಣ ಮಾದಕ ದ್ರವ್ಯ ನಿಗ್ರಹ ದಳ (Telangana Anti Narcotics Bureau) ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಬೆಂಗಳೂರಿನಿಂದ ಸಿಂಥೆಟಿಕ್ ಡ್ರಗ್ಸ್, ಆಂಧ್ರಪ್ರದೇಶ - ಒಡಿಶಾದ ಗಡಿ ಮೂಲಕ ಗಾಂಜಾ, ರಾಜಸ್ಥಾನದಿಂದ ಒಪಿಎ ಮಾದಕ ವಸ್ತು ಹಾಗೂ ಅಮೆರಿಕದಿಂದ ಒಜಿ ಮಾದಕ ವಸ್ತು ಹೈದರಾಬಾದ್‌ಗೆ ಪೂರೈಕೆಯಾಗುತ್ತಿದೆ ಎಂದು ಪೊಲೀಸರು ಕಂಡು ಕೊಂಡಿದ್ದಾರೆ. ಅಂತೆಯೇ, ಸಿಎಂ ರೇವಂತ್ ರೆಡ್ಡಿ ಆದೇಶದ ಮೇರೆಗೆ ಪೊಲೀಸ್ ತಂಡಗಳು ಡ್ರಗ್ಸ್ ಮೂಲಗಳ ಪತ್ತೆಗೆ ಕಾರ್ಯಾಚರಣೆ ತೀವ್ರಗೊಳಿಸಿವೆ.
ಪೊಲೀಸರು 'ಡಿಕಾಯ್ ಆಪರೇಷನ್' (ಮಾರುವೇಷ) ಮೂಲಕ ಮಾಸ್ಟರ್ ಮೈಂಡ್ಗಳನ್ನು ಬಯಲಿಗೆ ಎಳೆಯುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇತ್ತೀಚೆಗಷ್ಟೇ ಹೈದರಾಬಾದ್‌ಗೆ ಎಂಡಿಎಂಎ ಮಾದಕ ವಸ್ತು ತಲುಪಿಸುತ್ತಿದ್ದ ಗ್ಯಾಂಗ್ ಅನ್ನು ಡಿಕಾಯ್ ಆಪರೇಷನ್ ಮೂಲಕವೇ ಹಿಡಿಯಲಾಗಿದೆ. ಅಂತಾರಾಜ್ಯ ದರೋಡೆಕೋರರನ್ನು ಹಿಡಿಯಲು ಹೋಗುವ ಪೊಲೀಸರಿಗೆ ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯುವಂತೆ ಆದೇಶ ನೀಡಲಾಗಿದೆ.
ಪ್ರಮುಖ ಪ್ರದೇಶಗಳ ಮೇಲೆ ಕಣ್ಗಾವಲು:ಆಂಧ್ರ - ಒಡಿಶಾ ಗಡಿಯಿಂದ ಆಂಧ್ರದ ಏಜೆನ್ಸಿಗಳ ಮೂಲಕ ಹೈದರಾಬಾದ್‌ಗೆ ಗಾಂಜಾ ತಲುಪಿಸಲಾಗುತ್ತಿದೆ. ಅಲ್ಲದೇ, ತೆಲಂಗಾಣ ಪೊಲೀಸರ ತಪಾಸಣೆ ಹೆಚ್ಚಿರುವುದರಿಂದ ಕೊಕೇನ್, ಹೆರಾಯಿನ್, ಎಲ್‌ಎಸ್‌ಡಿ ಮುಂತಾದ ಡ್ರಗ್ಸ್ ಪೂರೈಕೆ ಮಾಡುವ ನೈಜೀರಿಯನ್ನರು ಬೆಂಗಳೂರಿನತ್ತ ಮುಖ ಮಾಡುತ್ತಿದ್ದಾರೆ. ಆದ್ದರಿಂದ ಕರ್ನಾಟಕ, ರಾಜಸ್ಥಾನ ಸೇರಿ ಇತರ ರಾಜ್ಯಗಳ ಪೊಲೀಸರ ನೆರವಿನೊಂದಿಗೆ ತೆಲಂಗಾಣ ಪೊಲೀಸರು ಈ ಜಾಲಕ್ಕೆ ಕಡಿವಾಣ ಹಾಕಲು ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಮಾದಕ ದ್ರವ್ಯ ನಿಗ್ರಹ ದಳ (ಎನ್‌ಎಬಿ)ದ ತಂಡಗಳು ಆಂಧ್ರ-ಒಡಿಶಾ ಗಡಿ, ರಾಜಸ್ಥಾನ ಮತ್ತು ಬೆಂಗಳೂರಿನಲ್ಲಿ ಬೀಡುಬಿಟ್ಟಿವೆ ಎಂದು ತಿಳಿದು ಬಂದಿದೆ.
ಪಾನ್ಶಾಪ್ಗಳಲ್ಲಿ ಗಾಂಜಾ ಮಾರಾಟ:ಆಂಧ್ರ ಮತ್ತು ಒಡಿಶಾದಿಂದ ಬರುವ ಗಾಂಜಾದಲ್ಲಿ ಶೇ.60ರಷ್ಟು ಗಾಂಜಾ ಧೂಲ್‌ಪೇಟೆಗೆ ತಲುಪುತ್ತದೆ. ಇಲ್ಲಿನ ಸುಮಾರು 40 ಕುಟುಂಬಗಳು ಬೇರೆ ಪ್ರದೇಶಗಳಿಗೆ ಇದನ್ನು ತಲುಪಿಸುತ್ತಿವೆ. ಕಿರಾಣಿ, ಪಾನ್ಶಾಪ್ಗಳಲ್ಲಿ ಚಿಕ್ಕ ಚಿಕ್ಕ ಪ್ಯಾಕೆಟ್ಗಳಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದೆ. ಈ ಮಾಹಿತಿ ಪಡೆದ ಪೊಲೀಸರು ಅಬಕಾರಿ ಇಲಾಖೆಯೊಂದಿಗೆ ಕಾರ್ಯಾಚರಣೆಗೆ ಸಿದ್ಧತೆ ನಡೆಸಿದ್ದಾರೆ.
ಪಬ್‌ಗಳ ಮಾಲೀಕರಿಗೆ ಎಚ್ಚರಿಕೆ: ಮತ್ತೊಂದೆಡೆ, ಪಬ್‌ಗಳು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಶಿಕ್ಷಣ ಸಂಸ್ಥೆಗಳ ಬಳಿಯೂ ಡ್ರಗ್ಸ್ ಹಾವಳಿ ಜಾಸ್ತಿಯಾಗಿದೆ. ಆದ್ದರಿಂದ ಎನ್‌ಎಬಿ ನಿರ್ದೇಶಕ ಸಂದೀಪ್ ಸ್ಯಾಂಡಿಲ್ಯ, ಡ್ರಗ್ಸ್ ಕುರಿತಂತೆ ಹಲವು ಪಬ್‌ಗಳ ವ್ಯವಸ್ಥಾಪಕರು ಮತ್ತು ಶಿಕ್ಷಣ ಸಂಸ್ಥೆಗಳ ಮಾಲೀಕರಿಗೂ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಜೊತೆಗೆ ಶಾಲೆಗಳಲ್ಲಿ ಮಾದಕ ವಸ್ತು ವಿರೋಧಿ ಸಮಿತಿಗಳನ್ನು ರಚಿಸಲು ಸಹ ಸೂಚಿಸಲಾಗಿದೆ.
ಇದನ್ನೂ ಓದಿ:ಟ್ರೈನಿಂಗ್ ಅವಧಿಯಲ್ಲೇ ಐಎಎಸ್ ಅಧಿಕಾರಿ ಪೂಜಾ ವಿವಾದ; ರೈತರಿಗೆ ಪಿಸ್ತೂಲ್ ಹಿಡಿದು ಬೆದರಿಸಿದ್ದ ತಾಯಿ!