ಹೈದರಾಬಾದ್(ತೆಲಂಗಾಣ): ತೆಲಂಗಾಣದಲ್ಲಿ ಇಂದಿನಿಂದ ರೈತರ ಬೆಳೆ ಸಾಲ ಮನ್ನಾ ಪ್ರಕ್ರಿಯೆ ಆರಂಭವಾಗಲಿದೆ. ರಾಜ್ಯ ಸರ್ಕಾರ 1 ಲಕ್ಷದವರೆಗಿನ ಸಾಲ ಮನ್ನಾ ಮಾಡಲು ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಘೋಷಿಸಿದ್ದಾರೆ. ಕೃಷಿ ಅಭಿವೃದ್ಧಿಯಲ್ಲಿ ದೇಶ ತೆಲಂಗಾಣ ಮಾದರಿಯನ್ನು ಅನುಸರಿಸಬೇಕು ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದ್ದಾರೆ.
''ಇಂದು (ಜುಲೈ 18) ಸಂಜೆ 4 ಗಂಟೆಗೆ 1 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡುತ್ತಿದ್ದೇವೆ. ಇದು ನನ್ನ ಜೀವನದಲ್ಲಿ ಮರೆಯಲಾಗದ ದಿನ. 7,000 ಕೋಟಿ ರೂಪಾಯಿ ನೇರವಾಗಿ ರೈತರ ಖಾತೆ ಸೇರಲಿದೆ. ಅದೇ ರೀತಿ, ಈ ತಿಂಗಳಾಂತ್ಯದೊಳಗೆ 1.5 ಲಕ್ಷ ರೂ.ವರೆಗಿನ ರೈತರ ಸಾಲ ಮತ್ತು ಆಗಸ್ಟ್‌ನಲ್ಲಿ 2 ಲಕ್ಷ ರೂ.ವರೆಗಿನ ರೈತರ ಸಾಲ ಮನ್ನಾ ಮಾಡಿ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳಿಸುತ್ತೇವೆ'' ಎಂದು ರೆಡ್ಡಿ ತಿಳಿಸಿದ್ದಾರೆ.
ಬುಧವಾರ ಹೈದರಾಬಾದ್‌ನ ಜ್ಯೋತಿರಾವ್ ಫುಲೆ ಪ್ರಜಾ ಭವನದಲ್ಲಿ ವಿಧಾನ ಸಭೆ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ಮತ್ತು ಇತರ ಕಾಂಗ್ರೆಸ್ ಮುಖಂಡರೊಂದಿಗೆ ಸಿಎಂ ರೆಡ್ಡಿ ಸಭೆ ನಡೆಸಿದರು.
ಬಳಿಕ ಮಾತನಾಡಿದ ಅವರು, ''2 ಲಕ್ಷದವರೆಗಿನ ರೈತರ ಸಾಲ ಮನ್ನಾ ಮಾಡುವುದಾಗಿ ವಾರಂಗಲ್ ಸಮಾವೇಶದಲ್ಲಿ ರಾಹುಲ್ ಗಾಂಧಿ ಭರವಸೆ ನೀಡಿದ್ದರು. 10 ವರ್ಷ ಅಧಿಕಾರದಲ್ಲಿದ್ದರೂ 28,000 ಕೋಟಿ ರೂ.ಗಳ ರೈತರ ಸಾಲ ಮನ್ನಾ ಮಾಡಲು ಕೆಸಿಆರ್‌ಗೆ ಸಾಧ್ಯವಾಗಿರಲಿಲ್ಲ. ಆಗಸ್ಟ್ 15ರೊಳಗೆ ಸಾಲ ಮನ್ನಾ ಮಾಡುವುದಾಗಿ ನಾವು ಚುನಾವಣಾ ಪ್ರಚಾರದ ವೇಳೆ ನೀಡಿದ್ದ ಭರವಸೆಯನ್ನು ಈಡೇರಿಸುತ್ತಿದ್ದೇವೆ'' ಎಂದರು.
''ಸಾಲ ಮನ್ನಾ ಕಷ್ಟಸಾಧ್ಯ. ಇದರಿಂದ ಸರ್ಕಾರಕ್ಕೆ ಆರ್ಥಿಕ ಸಮಸ್ಯೆ ಎದುರಾಗಲಿದೆ ಎಂದು ಆರ್ಥಿಕ ತಜ್ಞರು ಕೂಡ ಹೇಳಿದ್ದಾರೆ. ಆದರೆ, ಗಾಂಧಿ ಕುಟುಂಬ ಯಾವಾಗಲೂ ಮಾತು ಉಳಿಸಿಕೊಳ್ಳುತ್ತದೆ. ನಾವು ಮಾತು ಕೊಟ್ಟರೆ, ಅದನ್ನು ಮಾಡಿ ತೋರಿಸುತ್ತೇವೆ ಎಂಬ ರಾಹುಲ್ ಗಾಂಧಿ ಮಾತನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ. ಇದನ್ನೀಗ ಮಾಡುತ್ತಿದ್ದೇವೆ'' ಎಂದು ಹೇಳಿದರು.
ಮುಂದುವರೆದು ಮಾತನಾಡಿ, ''ಇಡೀ ದೇಶಕ್ಕೆ ತೆಲಂಗಾಣ ಭವಿಷ್ಯದಲ್ಲಿ ಮಾದರಿಯಾಗಬೇಕು. ಪ್ರತಿಯೊಬ್ಬ ರೈತನನ್ನೂ ಋಣಮುಕ್ತರನ್ನಾಗಿಸುವುದು ಕಾಂಗ್ರೆಸ್ ಸರ್ಕಾರದ ಗುರಿ. ಸಾಲ ಮನ್ನಾದ ಹೆಸರಿನಲ್ಲಿ ರೈತರನ್ನು ಕೆಸಿಆರ್ ರೀತಿ ಮೂರ್ಖರನ್ನಾಗಿಸುತ್ತಿಲ್ಲ. ರೈತರ ಸಾಲ ಮನ್ನಾ ಬಗ್ಗೆ ನಮ್ಮ ಸರ್ಕಾರ ಗಂಭೀರವಾಗಿದೆ. ಗ್ರಾಮ, ಮಂಡಲ ಮತ್ತು ಕ್ಷೇತ್ರ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಮತ್ತು ನಾವು ಮಾಡುತ್ತಿರುವ ಒಳ್ಳೆಯ ಕೆಲಸಗಳ ಬಗ್ಗೆ ಜನರಿಗೆ ತಿಳಿಸುತ್ತೇವೆ. ಸಾಲ ಮನ್ನಾ ಕುರಿತು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಬೇಕು. ದೇಶದ ಯಾವುದೇ ರಾಜ್ಯವು ಒಂದೇ ಕಂತಿನಲ್ಲಿ 31,000 ಕೋಟಿ ರೂಪಾಯಿ ಸಾಲ ಮನ್ನಾ ಮಾಡಿಲ್ಲ.''
''ತೆಲಂಗಾಣದಲ್ಲಿ ರಾಹುಲ್ ಗಾಂಧಿ ನೀಡಿದ್ದ ಭರವಸೆ ಜಾರಿಯಾಗಿದೆ ಎಂದು ಸಂಸದರು ಸಂಸತ್ತಿನಲ್ಲಿ ಪ್ರಸ್ತಾಪಿಸಬೇಕು. ಗ್ರಾಮ ಮತ್ತು ಮಂಡಲ ಕೇಂದ್ರಗಳಲ್ಲಿ ಕಾರ್ಯಕರ್ತರು ಬೈಕ್ ರ‍್ಯಾಲಿ ಆಯೋಜಿಸಬೇಕು. ಎಲ್ಲ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ನಡೆಯುವ ಸಾಲ ಮನ್ನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. 7 ತಿಂಗಳೊಳಗೆ ನಮ್ಮ ಸರ್ಕಾರ ಜನಕಲ್ಯಾಣ ಕಾರ್ಯಕ್ರಮಗಳಿಗೆ 30 ಸಾವಿರ ಕೋಟಿ ರೂ. ಖರ್ಚು ಮಾಡಿದೆ'' ಎಂದು ಸಿಎಂ ರೇವಂತ್ ರೆಡ್ಡಿ ಹೇಳಿದರು.
ಇದನ್ನೂ ಓದಿ:ಕರ್ನಾಟಕದ ಖಾಸಗಿ ಕಂಪನಿಗಳಿಗೆ ಆಂಧ್ರದ ಗಾಳ: ರಾಜ್ಯದಲ್ಲಿ ಹೂಡಿಕೆಗೆ ನಾಸ್ಕಾಮ್ಗೆ ಆಹ್ವಾನ ನೀಡಿದ ಸಚಿವ ಲೋಕೇಶ್