ಚರ್ಬಾ (ಹಿಮಾಚಲಪ್ರದೇಶ):ಶಿಕ್ಷಕರ ಹುದ್ದೆ ಗೌರವಯುತ ಮತ್ತು ಉನ್ನತವಾದುದು ಎಂದು ಗುರುತಿಸಲಾಗುತ್ತದೆ. ಮಕ್ಕಳ ಮತ್ತು ಸಮಾಜದ ಭವಿಷ್ಯವನ್ನು ರೂಪಿಸುವ ಮಹತ್ತರ ಹೊಣೆಯೂ ಅವರ ಮೇಲಿರುತ್ತದೆ. ಅಂತಹ ಹುದ್ದೆಗೆ ಇಲ್ಲಿನ ಸರ್ಕಾರಿ ಶಾಲೆಯೊಂದು ನೀಡಿದ ಕಿಮ್ಮತ್ತು ಮಾತ್ರ ಕನಿಷ್ಟವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಪೋಸ್ಟ್ ನಗೆಪಾಟಲಿಗೀಡಾಗಿದೆ.
ಹಿಮಾಚಲ ಪ್ರದೇಶದ ಸರ್ಕಾರಿ ಪ್ರೌಢಶಾಲೆಯೊಂದು ಶಿಕ್ಷಕರ ಹುದ್ದೆಗೆ ಅಧಿಸೂಚನೆ ಹೊರಡಿಸಿದೆ. ಅದರಲ್ಲಿ ಎರಡು ಬೇರೆ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಹ್ವಾನಿಸಲಾಗಿದೆ. ಒಂದು ಅರೆಕಾಲಿಕ ಶಿಕ್ಷಕ ಹುದ್ದೆಯಾಗಿದ್ದರೆ, ಇನ್ನೊಂದು ವಾಚ್‌ಮನ್ ಪೋಸ್ಟ್. ವಿಶೇಷವೆಂದರೆ, ಶಿಕ್ಷಕರಿಗಿಂತ ಹೆಚ್ಚಿನ ಸಂಬಳವನ್ನು ವಾಚ್ಮನ್ಗೆ ನೀಡಲಾಗಿದೆ. ಈ ತರ್ಕವೇ ಈಗ ಬಹುಚರ್ಚಿತ ವಿಷಯವಾಗಿದೆ.
ಅರೆಕಾಲಿಕ ಶಿಕ್ಷಕರಿಗೆ ಶೈಕ್ಷಣಿಕ ಅರ್ಹತೆ B.Sc./M.Sc ಇರಬೇಕು ಎಂದು ಸೂಚನೆಯಲ್ಲಿ ನೀಡಲಾಗಿದೆ. ವಾಚ್‌ಮನ್ ಹುದ್ದೆಗೆ 10 ನೇ ತರಗತಿ ಅರ್ಹತೆಯಾಗಿದೆ. ಶಿಕ್ಷಕರ ಸಂಬಳ 8,450 ರೂಪಾಯಿ ಇದ್ದರೆ, ವಾಚ್ಮನ್ಗೆ 10,630 ರೂಪಾಯಿ ಎಂದು ನಮೂದಿಸಲಾಗಿದೆ. ಎರಡೂ ಹುದ್ದೆಗಳಿಗೆ ಅಕ್ಟೋಬರ್ 20 ರಂದು ಸಂದರ್ಶನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ನರೇಗಾ ಕೂಲಿಗಿಂತ ಕಡಿಮೆ:ರಾಜ್ಯ ಶಿಕ್ಷಣ ಇಲಾಖೆಯಡಿ ಪ್ರಕಟಿಸಲಾದ ಈ ನೇಮಕಾತಿ ಪ್ರಕಟಣೆ ನೋಡಿದವರು ಮುಸಿಮುಸಿ ನಗುವಂತಾಗಿದೆ. ಯಾವ ಪುರುಷಾರ್ಥಕ್ಕಾಗಿ ಕಷ್ಟಪಟ್ಟು ಪದವಿ ಪಡೆಯಬೇಕು ಎಂದು ಪ್ರಶ್ನಿಸುತ್ತಿದ್ದಾರೆ. ವಾಚ್‌ಮನ್ ಹುದ್ದೆಗಿಂತ ಶಿಕ್ಷಕ ಹುದ್ದೆಯೇ ಕನಿಷ್ಟವಾಯಿತಾ ಎಂದು ಕೆಲವರು ಪ್ರಶ್ನಿಸಿದ್ದಾರೆ. ನರೇಗಾ ಯೋಜನೆಯಡಿ ಕೆಲಸ ಮಾಡಿದಲ್ಲಿ ದಿನಕ್ಕೆ 300 ರೂಪಾಯಿಯಂತೆ ತಿಂಗಳಿಗೆ 9 ಸಾವಿರ ಗಳಿಸಬಹುದು. ಶಿಕ್ಷಕ ಹುದ್ದೆಗೆ ಕೇವಲ 8 ಸಾವಿರ ಘೋಷಿಸಿದ್ದು, ನರೇಗಾ ಕೂಲಿಗಿಂತಲೂ ಕಡಿಮೆಯಾಗಿದೆ.