ರೋಹ್ತಾಸ್ (ಬಿಹಾರ):ಶಾಲಾ ಉಡುಗೆ ಚಿಕ್ಕದಾಗಿದೆ, ಸ್ವಚ್ಛತೆ ಕಾಪಾಡಿಲ್ಲ ಎಂಬ ಕಾರಣಕ್ಕಾಗಿ ವಿದ್ಯಾರ್ಥಿನಿಯ ಮೇಲೆ ಶಿಕ್ಷಕರು ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ತನ್ನನ್ನು ಮೂವರು ಶಿಕ್ಷಕರು ಥಳಿಸಿದ್ದಾರೆ ಎಂದು ಆಕೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.
ಬಿಹಾರದ ರೋಹ್ತಾಸ್ನಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಹಲ್ಲೆಗೊಳಗಾದ ವಿದ್ಯಾರ್ಥಿನಿ ದಲಿತ ಸಮುದಾಯಕ್ಕೆ ಸೇರಿದ್ದು, ಮೂವರು ಶಿಕ್ಷಕರ ಮೇಲೆ ಕ್ರಮಕ್ಕೆ ಆಗ್ರಹಿಸಲಾಗಿದೆ. ವಿದ್ಯಾರ್ಥಿನಿಯ ತಲೆಗೆ ಪೆಟ್ಟಾಗಿದ್ದು, ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪವೇನು?:ರೋಹ್ತಾಸ್ ಜಿಲ್ಲೆಯ ಕಾರ್ಘರ್ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ಕಾರಿ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಮೂವರು ಶಿಕ್ಷಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ. ಶಾಲೆಯಲ್ಲಿ ಎಲ್ಲ ಮಕ್ಕಳ ಮುಂದೆ ತನ್ನನ್ನು ಅವಮಾನ ಮಾಡಿ, ಶಿಕ್ಷಕರು ಥಳಿಸಿದ್ದಾರೆ ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ. ಅಲ್ಲದೇ, ತನ್ನ ಜಾತಿಯನ್ನು(ದಲಿತ) ನಿಂದಿಸುವ ಪದಗಳನ್ನು ಬಳಸಿದ್ದಾರೆ ಎಂದು ಆರೋಪಿಸಿದ್ದಾಳೆ.
ತನ್ನದು ಬಡಕುಟುಂಬ. ಹೀಗಾಗಿ, ಒಂದೇ ಬಟ್ಟೆಯನ್ನು ಧರಿಸಿ ಶಾಲೆಗೆ ಬರುತ್ತೇನೆ. ದೈಹಿಕ ಎತ್ತರ ಹೆಚ್ಚಾದ ಕಾರಣ ಬಟ್ಟೆ ಸ್ವಲ್ಪ ಚಿಕ್ಕದಾಗಿದೆ. ಆದರೆ, ಶಾಲೆಯ ಮುಖ್ಯ ಶಿಕ್ಷಕ, ಸಹಾಯಕ ಶಿಕ್ಷಕ ಮತ್ತು ಇನ್ನೊಬ್ಬ ಶಿಕ್ಷಕ ತನ್ನನ್ನು ನಿಂದಿಸಿ, ಅಸ್ವಚ್ಚತೆಯ ಕಾರಣ ನೀಡಿ ಹಲ್ಲೆ ಮಾಡಿದ್ದಾರೆ ಎಂದು ವಿದ್ಯಾರ್ಥಿನಿ ದೂರಿನಲ್ಲಿ ತಿಳಿಸಿದ್ದಾಳೆ.