ಅಮರಾವತಿ(ಆಂಧ್ರಪ್ರದೇಶ):ತೆಲುಗು ದೇಶಂ ಪಕ್ಷದ(ಟಿಡಿಪಿ) ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಅವರು ನಾಲ್ಕನೇ ಬಾರಿಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಮತ್ತು ಎನ್‌ಡಿಎ (ಟಿಡಿಪಿ, ಜನಸೇನಾ ಮತ್ತು ಬಿಜೆಪಿ) ನಾಯಕರಾಗಿ ಆಯ್ಕೆಯಾಗಿದ್ದಾರೆ.
ವಿಜಯವಾಡದಲ್ಲಿ ಇಂದು ನಡೆದ ಮೂರು ಪಕ್ಷಗಳ ಶಾಸಕರ ಸಭೆಯಲ್ಲಿ ಜನಸೇನಾ ಪಕ್ಷದ ಮುಖ್ಯಸ್ಥ, ನಟ ಪವನ್ ಕಲ್ಯಾಣ್ ಅವರು ಚಂದ್ರಬಾಬು ನಾಯ್ಡು ಅವರನ್ನು ಎನ್‌ಡಿಎ ನಾಯಕರನ್ನಾಗಿ ಪ್ರಸ್ತಾಪಿಸಿದರು. ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷೆ ಡಿ.ಪುರಂದೇಶ್ವರಿ ಸೇರಿದಂತೆ ಎಲ್ಲ ಶಾಸಕರು ಒಪ್ಪಿಗೆ ನೀಡಿದರು. ಇದರೊಂದಿಗೆ ನಾಯ್ಡು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಇದಕ್ಕೂ ಮುನ್ನ ನಡೆದ ಟಿಡಿಪಿ ಶಾಸಕಾಂಗ ಸಭೆಯಲ್ಲಿ ನಾಯ್ಡು ಅವರು ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾದರು. ಅದೇ ರೀತಿ, ರಾಜ್ಯದಲ್ಲಿ ಸ್ಪರ್ಧಿಸಿದ 21 ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿ ಚರಿತ್ರೆ ಬರೆದಿರುವ ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಪಕ್ಷದ ವಿಧಾನಸಭೆ ನಾಯಕರಾಗಿ ಆಯ್ಕೆಯಾದರು.
ನಾಯ್ಡು ಪದಗ್ರಹಣಕ್ಕೆ ಮೋದಿ:ಎನ್‌ಡಿಎ ನಾಯಕರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಚಂದ್ರಬಾಬು ನಾಯ್ಡು, "ನಿಮ್ಮೆಲ್ಲರ ಸಹಕಾರದೊಂದಿಗೆ ನಾಳೆ (ಜೂನ್ 12) ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದೇನೆ. ಕೂಟದ ನಾಯಕನನ್ನಾಗಿ ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು. ಪದಗ್ರಹಣ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ" ಎಂದು ಹೇಳಿದರು.
'ಆಂಧ್ರದ ಅಭಿವೃದ್ಧಿಗೆ ಕೇಂದ್ರದ ನೆರವು ಅಗತ್ಯ': ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದು, ಆಂಧ್ರಪ್ರದೇಶದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ನೆರವಿನ ಅಗತ್ಯವಿದೆ. ರಾಜ್ಯದ ಪ್ರಗತಿಗಾಗಿ ಪ್ರಧಾನಿ ಮೋದಿ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.