ಅಹಮದಾಬಾದ್ (ಗುಜರಾತ್): ಉದ್ಯಮಿಯೊಬ್ಬರ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ 42 ವರ್ಷದ 'ಮಾಟಗಾರ' ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾನೆ. ಸಾವಿಗೆ ಮುನ್ನ ನಡೆಸಿದ ತನಿಖೆಯಲ್ಲಿ ಪಾನೀಯಕ್ಕೆ ರಾಸಾಯನಿಕ ಬೆರೆಸಿ 12 ಮಂದಿ ಸಾವಿಗೆ ಕಾರಣನಾಗಿದ್ದಾಗಿ ಈತ ತಪ್ಪೊಪ್ಪಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನವಲ್ಸಿನ್ ಚಾವ್ಡ ಸಾವನ್ನಪ್ಪಿದ ಮಾಟಗಾರ. ಡಿಸೆಂಬರ್ 3ರಂದು ಈತನನ್ನು ಬಂಧಿಸಲಾಗಿತ್ತು. ಉದ್ಯಮಿ ಹತ್ಯೆಗೆ ಸಂಚು ರೂಪಿಸಿದ್ದ ಕುರಿತು ತಂತ್ರಿಯ ಟ್ಯಾಕ್ಸಿ ಉದ್ಯಮದ ಪಾರ್ಟನರ್ ಪೊಲೀಸರಿಗೆ ಸುಳಿವು ನೀಡಿದ್ದ. ಈ ಹಿನ್ನೆಲೆ ಮಾಟಗಾರನನ್ನು ಸರ್ಖೇಜ್ ಪೊಲೀಸರು ಬಂಧಿಸಿದ್ದರು.
ನರಬಲಿ ಸೇರಿದಂತೆ ಸಾಧ್ಯವಾದ ಹಲವು ಕ್ಷುದ್ರ ಅಭ್ಯಾಸಗಳಲ್ಲಿ ಭಾಗಿಯಾಗಿರುವ ಸಾಧ್ಯತೆ ಕುರಿತು ಈತನನ್ನು ತನಿಖೆ ನಡೆಸಲು ಪೊಲೀಸರು ಡಿಸೆಂಬರ್ 10ರ ವರೆಗೆ ವಿಚಾರಣೆ ನಡೆಸಲು ನ್ಯಾಯಾಲಯದಿಂದ ಅನುಮತಿ ಪಡೆದಿದ್ದರು.
ರಾಸಾಯನಿಕ ಬಳಕೆ ಮಾಡಿ 12 ಕೊಲೆ:ಭಾನುವಾರ ಬೆಳಗ್ಗೆ 10ರ ಸುಮಾರಿಗೆ ಚಾವ್ಡಾ ಅನಾರೋಗ್ಯಕ್ಕೆ ಒಳಗಾಗಿದ್ದು, ತಕ್ಷಣಕ್ಕೆ ಆಂಬ್ಯುಲೆನ್ಸ್ ಮೂಲಕ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಆತ ಆದಾಗಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದರು. ತನಿಖೆ ವೇಳೆ ಆರೋಪಿ 12 ಕೊಲೆ ಮಾಡಿರುವ ಕುರಿತು ಒಪ್ಪಿಕೊಂಡಿದ್ದು, ಈ ಎಲ್ಲಾ ಕೊಲೆಗಳನ್ನು ರಾಸಾಯನಿಕವೊಂದನ್ನು ಪಾನೀಯದೊಂದಿಗೆ ಬೆರೆಸಿ ಮಾಡಿರುವುದಾಗಿ ಬಾಯ್ಬಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಡಿಸಿಪಿ ಶಿವರಾಮ್ ವರ್ಮಾ, ಆರೋಪಿಯು ಕ್ಷುದ್ರ ಪ್ರಯೋಗದ ಜೊತೆಗೆ ನೀರಿನೊಂದಿಗೆ ಸೋಡಿಯಂ ನೈಟ್ರೇಟ್ ಬೆರೆಸಿ, ಕುಡಿಸಿ 12 ಮಂದಿಯ ಸಾವಿಗೆ ಕಾರಣವಾಗಿದ್ದಾಗಿ ತಪ್ಪು ಒಪ್ಪಿಕೊಂಡಿದ್ದ. ಅಹಮದಾಬಾದ್ನಲ್ಲಿ ಒಬ್ಬ, ಸುರೇಂದ್ರನಗರ್ನಲ್ಲಿ ತನ್ನ ಕುಟುಂಬದ ಮೂವರು ಸದಸ್ಯರು ಸೇರಿದಂತೆ ಆರು ಮಂದಿಯನ್ನು, ರಾಜ್ಕೋಟ್ನಲ್ಲಿ ಮೂವರು ಮತ್ತು ವಂಕನೇರ್ ಹಾಗೂ ಅಂಜರ್ನಲ್ಲಿ ತಲಾ ಒಬ್ಬರಂತೆ ಒಟ್ಟು 12 ಮಂದಿಯ ಸಾವಿಗೆ ಕಾರಣನಾಗಿದ್ದಾನೆ ಎಂದು ಮಾಹಿತಿ ನೀಡಿದರು.
2021ರ ಆಗಸ್ಟ್ನಲ್ಲಿ ಅಹಮದಾಬಾದ್ನಲ್ಲಿ ಈತ ವಿಷವಿಕ್ಕಿ ಕೊಂದ ಪ್ರಕರಣವನ್ನು ರಸ್ತೆ ಅಪಘಾತದಂತೆ ಬಿಂಬಿಸಲಾಗಿತ್ತು. ಅದರೆ, ಮರಣೋತ್ತರ ಪರೀಕ್ಷೆಯಲ್ಲಿ ವಿಷ ಮೃತನ ಸಾವಿಗೆ ಕಾರಣವಾಗಿತ್ತು. ಅದೇ ರೀತಿಯಲ್ಲಿ ಈತ 14 ವರ್ಷದ ಹಿಂದೆ ಅಜ್ಜಿ ಮತ್ತು ವರ್ಷದ ಹಿಂದೆ ತಾಯಿ ಮತ್ತು ಚಿಕ್ಕಪ್ಪನನ್ನು ಕೊಂದಿದ್ದ ಎಂಬುದು ತನಿಖೆಯಲ್ಲಿ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಸುರೇಂದ್ರನಗರ್ನಲ್ಲಿ ಡ್ರೈ ಕ್ಲೀನಿಂಗ್ಗೆ ಬಳಸುತ್ತಿದ್ದ ಸೋಡಿಯಂ ನೈಟ್ರೇಟ್ ಅನ್ನು ಈತ ತನ್ನ ಅಪರಾಧಕ್ಕೆ ಬಳಕೆ ಮಾಡುತ್ತಿದ್ದ. ಈ ರಾಸಾಯನಿಕದಿಂದ ಅನೇಕರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮತ್ತೆ ಅನೇಕರ ಸಾವಿನ ಕುರಿತು ತನಿಖೆ ನಡೆಸಬೇಕಿದೆ. ಚಾವ್ಡಾ ಈ ರಾಸಾಯನಿಕ ಬಳಕೆಯನ್ನು ಮತ್ತೊಬ್ಬ ತಂತ್ರಿಯಿಂದ ಕಲಿತಿದ್ದ ಎಂಬುದು ತನಿಖೆಯಲ್ಲಿ ಬಯಲಾಗಿದೆ.
ಇದನ್ನೂ ಓದಿ: ದೆಹಲಿಯ 40 ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ; 30,000 ಡಾಲರ್ ನೀಡುವಂತೆ ಬೇಡಿಕೆ