ವಾರಾಣಸಿ: ಕಾಶಿ ದೇಗುಲ ದರ್ಶನಕ್ಕೆ ತೆರಳಿದ್ದ ತಮಿಳುನಾಡಿನ 40 ಪ್ರವಾಸಿಗರ ತಂಡಕ್ಕೆ ವ್ಯಕ್ತಿಯೊಬ್ಬ ವಂಚಿಸಿದ್ದು, ಅವರ ಮೊಬೈಲ್, ವಾಚ್ ಸೇರಿದಂತೆ ದುಬಾರಿ ವಸ್ತುಗಳನ್ನು ಎತ್ತಿಕೊಂಡು ಪರಾರಿಯಾಗಿದ್ದಾನೆ. ದೂರದ ಊರಿನಲ್ಲಿ ವಂಚನೆಗೆ ಒಳಗಾದ ಜನರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಏನಿದು ಪ್ರಕರಣ?: ತಮಿಳುನಾಡಿನಿಂದ ಕಾಶಿಯ ದರ್ಶನಕ್ಕೆ ತೆರಳಿದ ತಂಡಕ್ಕೆ ಮಾರ್ಗದರ್ಶನ ನೀಡುತ್ತೇನೆ ಎಂದು ವ್ಯಕ್ತಿಯೊಬ್ಬ ಪರಿಚಯಿಸಿಕೊಂಡಿದ್ದ. ಬುಧವಾರ ಕಾಶಿ ವಿಶ್ವನಾಥ ಮತ್ತು ಮಠ ವಿಶಾಲಕ್ಷ್ಮಿ ದೇಗುಲ ದರ್ಶನಕ್ಕೆ ಮಾರ್ಗದರ್ಶನ ಮಾಡಿಸಿ, ಪ್ರವೇಶಕ್ಕೆ ಸುಲಭ ಅವಕಾಶ ಕಲ್ಪಿಸಿಕೊಡುತ್ತೇನೆ ಎಂದು ನಂಬಿಸಿದ್ದಾನೆ. ಈತನ ಮಾತು ನಂಬಿದ ಅವರು, ಆತನ ಮಾರ್ಗದರ್ಶನ ಪಡೆದು, ವಿಶ್ವನಾಥ ದೇಗುಲ ದರ್ಶನ ಮಾಡಿದ್ದಾರೆ. ಬಳಿಕ ಲಹೋರಿ ತೊಲ ಮೂಲಕ ವಿಶಾಲಾಕ್ಷ್ಮಿ ದೇಗುಲ ದರ್ಶನಕ್ಕೆ ಕರೆದುಕೊಂಡು ಹೋಗಿದ್ದಾನೆ.
ಈ ವೇಳೆ ದೇಗುಲದ ಆವರಣ ತಲುಪುತ್ತಿದ್ದಂತೆ, ತಾನು ದರ್ಶನಕ್ಕೆ ಬರುವುದಿಲ್ಲ. ದೇವಸ್ಥಾನದ ಹೊರಗೆ ಇರುತ್ತೇನೆ ನೀವು ಹೋಗಿ ಬನ್ನಿ ಎಂದು ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾನೆ. ದೇಗುಲದಲ್ಲಿ ಮೊಬೈಲ್ ಸೇರಿದಂತೆ ಮೌಲ್ಯಯುತ ವಸ್ತುಗಳನ್ನು ಕೊಂಡೊಯ್ಯಲು ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ನನ್ನ ಬಳಿ ನೀಡಿ. ದರ್ಶನದ ಬಳಿಕ ವಾಪಸ್ ಕೊಡುತ್ತೇನೆ ಎಂದು ನಂಬಿಸಿ, ಅವರಿಂದ ಎಲ್ಲ ವಸ್ತುಗಳನ್ನು ಪಡೆದು ಕೇಸರಿ ಬಣ್ಣದ ಟವೆಲ್ನಲ್ಲಿ ಸುತ್ತಿಕೊಂಡಿದ್ದಾನೆ.