ಮುಂಬೈ (ಮಹಾರಾಷ್ಟ್ರ): ಕಳೆದ ವರ್ಷ ಸಮಾಜವಾದಿ ಪಕ್ಷದ ಮುಖಂಡ ಫಹಾದ್ ಅಹ್ಮದ್ ಅವರನ್ನು ಮದುವೆಯಾಗಿರುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಈಗ ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ ಎಂಬ ಸುದ್ದಿ ಜೋರಾಗಿದೆ. 2024ರ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಗೆ ಮುಂಬ್ರಾ-ಕಲ್ವಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಮಾಜವಾದಿ ಪಕ್ಷದಿಂದ ನಟಿ ಸ್ವರಾ ಭಾಸ್ಕರ್ ಚುನಾವಣಾ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಈ ಬಗ್ಗೆ ಸ್ವತಃ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ, ಶಾಸಕ ಅಬು ಅಸಿಂ ಅಜ್ಮಿ ಸುಳಿವು ನೀಡಿದ್ದಾರೆ. ಈ ಕುರಿತು ಸ್ವರಾ ಭಾಸ್ಕರ್ ಪತಿ, ಸಮಾಜವಾದಿ ಪಕ್ಷದ ಯುವ ಘಟಕದ ಅಧ್ಯಕ್ಷರಾದ ಫಹಾದ್ ಅಹ್ಮದ್ ಸಹ ಪ್ರತಿಕ್ರಿಯಿಸಿ, ನನ್ನ ಪತ್ನಿ ಸ್ವರಾ ಸದ್ಯ ರಾಜಕೀಯದಲ್ಲಿ ಇಲ್ಲ. ಹೀಗಾಗಿ ಈಗಲೇ ನಾನು ಏನನ್ನೂ ಹೇಳಲಾರೆ ಎಂದು ಹೇಳಿದ್ದಾರೆ. ಆದರೆ, ನನ್ನ ಪಕ್ಷದ ರಾಜ್ಯಾಧ್ಯಕ್ಷರು ಯಾವ ಕ್ಷೇತ್ರದಿಂದ ಸ್ಪರ್ಧಿಸುವಂತೆ ಹೇಳುತ್ತಾರೋ ಆ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಅದಕ್ಕೆ ನಾನು ಸಂಪೂರ್ಣ ಸಿದ್ಧನಿದ್ದೇನೆ. ಅವರು ನೀಡುವ ಆದೇಶವನ್ನು ನಾನು ಪಾಲಿಸುತ್ತೇನೆ ಎಂದೂ ಫಹಾದ್ ಸ್ಪಷ್ಟಪಡಿಸಿದ್ದಾರೆ.
ಮುಂಬ್ರಾ - ಕಲ್ವಾ ವಿಧಾನಸಭೆ ಕ್ಷೇತ್ರವನ್ನು ಪ್ರಸ್ತುತ ಶರದ್ ಪವಾರ್ ಬಣದ ಎನ್‌ಸಿಪಿ ಪಕ್ಷದ ನಾಯಕ ಜಿತೇಂದ್ರ ಅವದ್ ಪ್ರತಿನಿಧಿಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಈಗಾಗಲೇ ಕಾಂಗ್ರೆಸ್, ಎನ್‌ಸಿಪಿ ಹಾಗೂ ಉದ್ಧವ್ ಠಾಕ್ರೆ ಬಣದ ಶಿವಸೇನೆ ಜೊತೆಗೂಡಿ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟ ರಚಿಸಿಕೊಂಡಿವೆ. ಈ ಮಹಾ ವಿಕಾಸ್ ಅಘಾಡಿಯಲ್ಲಿ ಸಮಾಜವಾದಿ ಪಕ್ಷವೂ ಇದೆ. ಆದರೆ, ಈ ಮೈತ್ರಿಕೂಟದಲ್ಲಿ ಸರಿಯಾದ ಗೌರವ ಸಿಗುತ್ತಿಲ್ಲ ಎಂಬ ರಾಜ್ಯದ ಘಟಕದಲ್ಲಿ ಮುಖಂಡರಲ್ಲಿ ಭಾವನೆ ಮೂಡಿದೆ. ಈ ಬಗ್ಗೆ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರಿಗೆ ಅಬು ಅಜ್ಮಿ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.