ಸೂರ್ಯಪೇಟೆ(ತೆಲಂಗಾಣ): ಸೂರ್ಯಪೇಟೆಯಲ್ಲಿ ಇತ್ತೀಚೆಗೆ ನಡೆದಿದ್ದ ಮರ್ಯಾದಾ ಹತ್ಯೆ ಪ್ರಕರಣದಲ್ಲಿ ಮೃತ ವಡ್ಲಕೊಂಡ ಕೃಷ್ಣನ ಪತ್ನಿ ಭಾರ್ಗವಿಯ ಕುಟುಂಬದ ನಾಲ್ವರು ಹಾಗೂ ಇತರ ಇಬ್ಬರು ಭಾಗಿಯಾಗಿರುವುದು ತನಿಖೆಯಿಂದ ತಿಳಿದು ಬಂದಿದೆ. ಭಾರ್ಗವಿಯ ಇಬ್ಬರು ಸಹೋದರರು ನವೀನ್ ಹಾಗೂ ವಂಶಿ, ಅಜ್ಜಿ ಬುಚ್ಚಮ್ಮ, ತಂದೆ ಸೈದುಲ ಮತ್ತು ನವೀನ್ ಸ್ನೇಹಿತರಾದ ಮಹೇಶ್ ಹಾಗೂ ಸಾಯಿ ಚರಣ್ ಅವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಒಂದು ಕಾರು 5 ಮೊಬೈಲ್ ಫೋನ್ ಮತ್ತು ಚಾಕು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಸಂಪ್ರೀತ್ ಸಿಂಗ್ ತಿಳಿಸಿದ್ದಾರೆ.
ಘಟನೆ ಬಗ್ಗೆ ಎಸ್ಪಿ ನೀಡಿದ ಮಾಹಿತಿ ಹೀಗಿದೆ;"ಸೂರ್ಯಪೇಟೆಯ ಮಾಮಿಲಗುಡ್ಡದ ವಡ್ಲಕೊಂಡ ಕೃಷ್ಣ ಹಾಗೂ ಕೋಟ್ಲಾ ಭಾರ್ಗವಿ ಆರು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ತಂಗಿ ತಮ್ಮ ಇಚ್ಛೆಗೆ ವಿರುದ್ಧವಾಗಿ ಅಂತರ್ಜಾತಿ ವಿವಾಹವಾಗಿದ್ದಕ್ಕೆ ಕೋಪಗೊಂಡಿದ್ದ ಭಾರ್ಗವಿಯ ಸಹೋದರರು, ಎರಡು ತಿಂಗಳುಗಳಿಂದ ಕೃಷ್ಣನನ್ನು ಕೊಲ್ಲಲು ಪ್ಲ್ಯಾನ್ ಮಾಡಿದ್ದರು. ಯೋಜನೆಯಂತೆ ಆರೋಪಿಗಳಲ್ಲಿ ಒಬ್ಬನಾದ ಬೈರು ಮಹೇಶ್, ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಸೂರ್ಯಪೇಟೆಯ ಜನಗಾಮ ಕ್ರಾಸ್ ರಸ್ತೆಯ ಬಳಿಯ ತನ್ನ ಜಮೀನಿನಲ್ಲಿ ವಡ್ಲಕೊಂಡ ಕೃಷ್ಣನನ್ನು ಕೊಲೆ ಮಾಡಿದ್ದ. ಕೊಲೆ ಮಾಡಿದ ನಂತರ ಶವವನ್ನು ಆರೋಪಿಗಳು ಕಾರಿನ ಡಿಕ್ಕಿಯಲ್ಲಿ ಹಾಕಿ ಬೆಳಗಿನವರೆಗೂ ಓಡಾಡಿದ್ದರು. ನಂತರ ಬಲಸಮರಿ ಕಾಲುವೆಯ ಏರಿ ಮೇಲೆ ಎಸೆದು ಹೋಗಿದ್ದರು. ಸೋಮವಾರ ಬೆಳಗ್ಗೆ ಏರಿ ಮೇಲೆ ಆತನ ಮೃತದೇಹ ಪತ್ತೆಯಾಗಿತ್ತು. ಈ ಹಿಂದೆಯೂ ಕೃಷ್ಣನನ್ನು ಕೊಲ್ಲು 3 ಬಾರಿ ಯತ್ನ ನಡೆದಿರುವುದು ತನಿಖೆಯಿಂದ ತಿಳಿದುಬಂದಿದೆ" ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.