ಪಾಟ್ನಾ (ಬಿಹಾರ) : ಮೌನಿ ಅಮಾವಾಸ್ಯೆಯಂದು ಮಹಾಕುಂಭದಲ್ಲಿ ಕಾಲ್ತುಳಿತ ಸಂಭವಿಸಿದೆ. ಈ ಅವಘಡದಲ್ಲಿ 30 ಭಕ್ತರು ಪ್ರಾಣ ಕಳೆದುಕೊಂಡರೆ, 60 ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ಬಿಹಾರದ 10 ಮಹಿಳೆಯರೂ ಸೇರಿದ್ದಾರೆ. ಅಲ್ಲದೇ, ಇನ್ನೂ ಹಲವರು ನಾಪತ್ತೆಯಾಗಿದ್ದು, ಅವರ ಕುಟುಂಬದ ಸದಸ್ಯರಿಗೆ ಈ ಬಗ್ಗೆ ಯಾವುದೇ ಮಾಹಿತಿ ಸಿಗದೇ ಆತಂಕಕ್ಕೆ ಒಳಗಾಗಿದ್ದಾರೆ.
ಕಾಲ್ತುಳಿತದಲ್ಲಿ ಗೋಪಾಲಗಂಜ್‌ನ 4 ಮಹಿಳೆಯರು ದುರ್ಮರಣ : ಪ್ರಯಾಗ್‌ರಾಜ್‌ನಲ್ಲಿ ಬುಧವಾರ ಆಯೋಜಿಸಿದ್ದ ಮಹಾಕುಂಭದ ವೇಳೆ ಉಂಟಾದ ಕಾಲ್ತುಳಿತದಲ್ಲಿ ಗೋಪಾಲಗಂಜ್‌ನ 4 ಮಹಿಳೆಯರು ಸಾವನ್ನಪ್ಪಿದ್ದಾರೆ. ಇವರಲ್ಲಿ ಬರೌಲಿ ಪೊಲೀಸ್ ಠಾಣಾ ವ್ಯಾಪ್ತಿಯ ಮದನ್‌ಪುರ ಗ್ರಾಮದ ನಿವಾಸಿ ಶಿವಕಾಳಿ ದೇವಿ (65), ಭೋರ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಮನಗರ ಗ್ರಾಮದ ಸರಸ್ವತಿ ದೇವಿ(68), ಉಚ್ಕಾ ಪೊಲೀಸ್ ಠಾಣೆ ವ್ಯಾಪ್ತಿಯ ಶ್ಯಾಂಪುರ್ ಗ್ರಾಮದ ತಾರಾ ದೇವಿ (62) ಮತ್ತು ಬಾಳೇಸರ ಗ್ರಾಮದ ಹಳೆ ಸುಶೀಲಾದೇವಿ ಮೃತರು ಎಂಬುದು ತಿಳಿದುಬಂದಿದೆ.
ಗೋಪಾಲಗಂಜ್‌ನ ಹಲವು ಮಹಿಳೆಯರು ನಾಪತ್ತೆ : ಇದಲ್ಲದೇ ಬಾಳೇಸರ ಗ್ರಾಮದ ನಿವಾಸಿ ಕಾಂತಿದೇವಿ (65 ವರ್ಷ) ಎಂಬುವವರೂ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಇದೇ ವೇಳೆ ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಜಗದೀಶ್‌ಪುರ ಗ್ರಾಮದ ನಿವಾಸಿಗಳಾದ ಮುನ್ನಿದೇವಿ, ರಾಜಕುಮಾರಿ ದೇವಿ, ಶೋಭಾವತಿ ದೇವಿ ಹಾಗೂ ರೀಮಾದೇವಿ ನಾಪತ್ತೆಯಾಗಿದ್ದು, ಅವರ ಕುಟುಂಬಕ್ಕೆ ನಾಪತ್ತೆಯಾದವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.
ಔರಂಗಾಬಾದ್‌ನ ಇಬ್ಬರು ಮಹಿಳಾ ಭಕ್ತರು ಮೃತ : ಬಿಹಾರದ ಔರಂಗಾಬಾದ್‌ನ ಇಬ್ಬರು ಮಹಿಳಾ ಭಕ್ತರು ಕೂಡ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದಾರೆ. ಮೃತ ರಾಜರಾಣಿ ದೇವಿ (65 ವರ್ಷ), ಗೋಹ್ ಬ್ಲಾಕ್‌ನ ಬಂಡೆಯಾ ಪೊಲೀಸ್ ಠಾಣೆ ವ್ಯಾಪ್ತಿಯ ಸೊಸುನಾ ಗ್ರಾಮದ ನಿವಾಸಿ ಎಂಬುದು ತಿಳಿದುಬಂದಿದೆ. ಸುರೇಶ್ ಯಾದವ್ ಅವರ ಪತ್ನಿ ರಾಜರಾಣಿ ಜನವರಿ 27 ರಂದು ತಮ್ಮ ಮಗ ಗುಡ್ಡು ಜೊತೆ ಪ್ರಯಾಗ್‌ರಾಜ್‌ಗೆ ಹೋಗಿದ್ದರು. ಅವರ ಜೊತೆಗೆ ಗ್ರಾಮದ ಇತರ ಜನರು ಕೂಡ ಮಹಾಕುಂಭ ಸ್ನಾನಕ್ಕೆ ತೆರಳಿದ್ದರು. ಇದೇ ರೀತಿ ಹಾಸ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮಾನ್ಪುರ ಗ್ರಾಮದ ನಿವಾಸಿ ಸೋನಮ್ ಕುಮಾರಿ (20) ಕೂಡ ಮಹಾಕುಂಭದಲ್ಲಿ ಮರಣ ಹೊಂದಿದ್ದಾರೆ.
ಸುಪೌಲ್ ಮತ್ತು ಮಧುಬನಿಯಿಂದ ತಲಾ ಒಬ್ಬ ಮಹಿಳೆಯರ ಮರಣ: ಮೌನಿ ಅಮಾವಾಸ್ಯೆಯಂದು ಮಹಾಕುಂಭದ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಸುಪೌಲ್‌ನ ಮಹಿಳೆಯೊಬ್ಬರು ಸಹ ತನ್ನ ಪ್ರಾಣ ಕಳೆದುಕೊಂಡಿದ್ದಾರೆ. ಮೃತರು ದೇಹಪುರದ ರಾಮ್‌ವಿಶನ್‌ಪುರ ಗ್ರಾಮದ ನಿವಾಸಿ. ಆಕೆಯ ಪತಿ ಬಿಹಾರಿ ಯಾದವ್ ಎರಡು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅವರ ಇಬ್ಬರು ಪುತ್ರರು ದೆಹಲಿಯಲ್ಲಿ ವಾಸಿಸುತ್ತಿದ್ದು, ಅಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಮಹಿಳೆಯ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮೃತದೇಹವನ್ನು ಗುರುವಾರ ಸುಪೌಲ್‌ಗೆ ತರಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದೇ ರೀತಿ ಮಧುಬನಿಯಿಂದ ಬಂದಿದ್ದ ಸೀತಾದೇವಿ (55 ವರ್ಷ) ಎಂಬುವವರೂ ಮೃತಪಟ್ಟಿದ್ದಾರೆ.
ಮುಜಾಫರ್‌ಪುರ ಮತ್ತು ಬಗಾಹಾದಿಂದ ತಲಾ ಒಬ್ಬರು ಮಹಿಳೆಯರ ಸಾವು : ಬಿಹಾರದ ಮುಜಾಫರ್‌ಪುರದ ಮಹಿಳೆಯೊಬ್ಬರು ಸಹ ಮಹಾಕುಂಭದ ಸಂದರ್ಭದಲ್ಲಿ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದಾರೆ. ಮೃತ ಶಿವಾ ದೇವಿ (60 ವರ್ಷ) ಜಿಲ್ಲೆಯ ಮಶಾರಿ ಬ್ಲಾಕ್‌ನ ಛಪ್ರಾ ಮೇಘ ಪಂಚಾಯತ್‌ನ ರೂಪನಾಥ ಟೋಲಾ ನಿವಾಸಿ. ಆಕೆಯ ಪತಿ ಬಲದೇವ್ ಶರ್ಮಾ ಈಗಾಗಲೇ ತೀರಿಕೊಂಡಿದ್ದಾರೆ. ಇದೇ ರೀತಿ ಬಗಾಹ ನಿವಾಸಿ ಮಹಿಳೆಯೂ ಸಾವನ್ನಪ್ಪಿದ್ದಾರೆ.
ಜೆಹಾನಾಬಾದ್‌ನ 3 ಮಹಿಳೆಯರು ನಾಪತ್ತೆ : ಪ್ರಯಾಗ್‌ರಾಜ್‌ನಲ್ಲಿ ಕುಂಭಸ್ನಾನ ಮಾಡಲು ತೆರಳಿದ್ದ ಸದರ್ ಬ್ಲಾಕ್‌ನ ಅಮನ್ ಗ್ರಾಮದ ನಿವಾಸಿಗಳಾದ ರೇಣುದೇವಿ ಮತ್ತು ಸಿಯಾಮಣಿ ದೇವಿ ಕಾಲ್ತುಳಿತದ ನಂತರ ಪತ್ತೆಯಾಗಿಲ್ಲ. ಇದರಿಂದಾಗಿ ಸದ್ಯ ಕುಟುಂಬದ ಸದಸ್ಯರು ಆತಂಕಕ್ಕೊಳಗಾಗಿದ್ದಾರೆ. ಹುಲಸ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಬೌರಿ ಗ್ರಾಮದ ನಿವಾಸಿ ಬಬಿತಾ ಕುಮಾರಿ ಕೂಡ ಕಾಲ್ತುಳಿತದ ನಂತರ ನಾಪತ್ತೆಯಾಗಿದ್ದಾರೆ. ಆಕೆಯ ಪತಿ ಮಂಜೀತ್ ಕುಮಾರ್ ಗೌತಮ್ ಅವರು ಜನವರಿ 27 ರಂದು ತನ್ನ ಅತ್ತಿಗೆಯೊಂದಿಗೆ ಕುಂಭ ಸ್ನಾನ ಮಾಡಲು ಹೋಗಿದ್ದರು. ಆದರೆ, ಕಾಲ್ತುಳಿತದ ನಂತರ ಒಬ್ಬರಿಗೊಬ್ಬರು ಬೇರ್ಪಟ್ಟರು. ಅಂದಿನಿಂದ ಅವರ ಬಗ್ಗೆ ಯಾವುದೇ ಸುದ್ದಿ ಲಭ್ಯವಾಗಿಲ್ಲ.
"ಜನವರಿ 27 ರಂದು ಕುಂಭಸ್ನಾನಕ್ಕಾಗಿ ತಾಯಿ ಮನೆಯಿಂದ ಪ್ರಯಾಗರಾಜ್‌ಗೆ ಹೋಗಿದ್ದರು. ಜನವರಿ 28 ರಂದು 3 ಗಂಟೆಯವರೆಗೆ ಫೋನ್‌ನಲ್ಲಿ ಮಾತನಾಡಿದ್ದಾರೆ. ಆದರೆ ಕಾಲ್ತುಳಿತದ ಬಗ್ಗೆ ಮಾಹಿತಿ ಬಂದ ನಂತರ, ಅವರ ಮೊಬೈಲ್‌ಗೆ ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ ಅವರ ಮೊಬೈಲ್ ಸಂಖ್ಯೆ ಸ್ವಿಚ್ಡ್ ಆಫ್ ಆಗಿದೆ' ಎಂದು ನಾಪತ್ತೆಯಾಗಿರುವ ರೇಣುದೇವಿ ಪುತ್ರ ಶಿವಶಂಕರ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ : ಮಹಾಕುಂಭ ಮೇಳ-2025; ಕಾಲ್ತುಳಿತದ ದುರ್ಘಟನೆ ಬಳಿಕ ಪ್ರಯಾಗ್‌ರಾಜ್‌ನಲ್ಲಿ ಹೇಗಿದೆ ಪರಿಸ್ಥಿತಿ? - MAHA KUMBH MELA 2025