ಮಹಾಕುಂಭ ನಗರ (ಉತ್ತರಪ್ರದೇಶ) : ಇಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಮತ್ತೊಂದು ಅಗ್ನಿ ದುರಂತ ಸಂಭವಿಸಿದೆ. ಸೆಕ್ಟರ್ 22 ರ ಚಾಮನ್‌ಗಂಜ್ ಚೌಕಿ ಬಳಿ ಗುರುವಾರ ಬೆಂಕಿ ಕಾಣಿಸಿಕೊಂಡು ಕನಿಷ್ಠ 15 ಟೆಂಟ್‌ಗಳು ಸುಟ್ಟು ಭಸ್ಮವಾಗಿವೆ. ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟೆಂಟ್ಗಳಿಗೆ ಇಂದು ಮಧ್ಯಾಹ್ನ ಬೆಂಕಿ ಹೊತ್ತಿಕೊಂಡ ಬಗ್ಗೆ ಮಾಹಿತಿ ಬಂದಿತು. ತಕ್ಷಣವೇ ಸ್ಥಳಕ್ಕೆ ಆಗಮಿಸಿ, ಅಗ್ನಿ ನಂದಿಸಲಾಗಿದೆ ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ (ಕುಂಭ) ಪ್ರಮೋದ್ ಶರ್ಮಾ ತಿಳಿಸಿದ್ದಾರೆ.
ಕೋಟ್ಯಂತರ ಭಕ್ತರು ಇಲ್ಲಿಗೆ ಆಗಮಿಸಿರುವ ಹಿನ್ನೆಲೆಯಲ್ಲಿ ಬೆಂಕಿ ಹೊತ್ತಿಕೊಂಡ ಸ್ಥಳಕ್ಕೆ ಅಗ್ನಿಶಾಮಕ ದಳ ವಾಹನಗಳನ್ನು ಸ್ಥಳಕ್ಕೆ ತರಲು ಕಷ್ಟವಾಯಿತು. ರಸ್ತೆ ತುಂಬಾ ಜನರು ತುಂಬಿಕೊಂಡಿದ್ದರಿಂದ ವಾಹನ ಸಂಚಾರ ಬಂದ್ ಮಾಡಲಾಗಿದೆ. ಹೀಗಾಗಿ 15 ಟೆಂಟ್ಗಳಿಗೆ ಬೆಂಕಿ ವ್ಯಾಪಿಸಿದೆ ಎಂದು ಅವರು ಹೇಳಿದರು.
ಬೆಂಕಿ ಅವಘಡದಲ್ಲಿ ಡೇರೆಗಳು ಸುಟ್ಟು ಹೋಗಿವೆ. ಸದ್ಯ ಪರಿಸ್ಥಿತಿ ತಿಳಿಯಾಗಿದೆ. ಆದರೆ, ಯಾವುದೇ ಜೀವಹಾನಿ ಅಥವಾ ಯಾರಿಗೂ ಗಾಯ ಕೂಡ ಆಗಿಲ್ಲ. ಮೇಲಾಗಿ ಇಲ್ಲಿ ನಿರ್ಮಿಸಲಾಗಿರುವ ಟೆಂಟ್‌ಗಳು ಅನಧಿಕೃತವಾಗಿವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು. ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬುದನ್ನು ತನಿಖೆ ನಡೆಸಲಾಗುತ್ತಿದೆ ಎಂದು ಇದೇ ವೇಳೆ ಅವರು ಹೇಳಿದರು.